ಬೆಂಗಳೂರು, ಫೆ.28: ಮೊಬೈಲ್ ಎಂಬುದು ಕೇವಲ ಸಂಪರ್ಕ ಸಾಧನವಾಗಿ ಇಂದು ಉಳಿದಿಲ್ಲ, ಬದಲಿಗೆ ಇಂದು ನಾವು ಮೊಬೈಲ್ ಇಲ್ಲದೆಯೇ ಬದಕಲು ಸಾಧ್ಯವಿಲ್ಲ ಎಂಬಂತೆ ನಮ್ಮನ್ನು ಬದಲಾಯಿಸಿಬಿಟ್ಟಿದೆ. ಡಿಜಿಟಲ್ ಆರೋಗ್ಯದ ಕುರಿತಾಗಿ ನೋಡುವುದಾದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ, ಡೂಮ್ ಸ್ಕ್ರೋಲಿಂಗ್(ಅತಿಯಾದ ವಿಡೀಯೋ ವೀಕ್ಷಣೆ) ಅಭ್ಯಾಸವು ನಮ್ಮ ಮೆದುಳಿನ ಪ್ರತಿಫಲ ವ್ಯವಸ್ಥೆಯನ್ನು ಬದಲಾಯಿಸಿಬಿಟ್ಟಿದೆ. ಇದರ ಪರಿಣಾಮ ಇಂದಿನ ಪೀಳಿಗೆ ಜನರು ಯಾವಾಗಲೂ ಆನ್‌ಲೈನ್‌ನಲ್ಲಿ ಇರುತ್ತಾರೆ ಜೊತೆಗೆ ನೋಡಲು ಸದಾ ಬಳಲಿದಂತೆ ಕಾಣಿಸುತ್ತಾರೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಾನಸಿಕ ಆರೋಗ್ಯ ಆಪ್ತಸಮಾಲೋಚಕರಾದ ಸುಭಾಷ್ ಹೆಚ್.ಜೆ ಹೇಳುತ್ತಾರೆ.
ಸ್ಮಾರ್ಟ್‌ಫೋನ್ ಯುಗ ಆರಂಭಕ್ಕೂ ಮುನ್ನ ಜನರ ನಡುವೆ ಸಂಪರ್ಕ ಉತ್ತಮವಾಗಿತ್ತು, ಅಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ರೋಗಿಗಳು ಮತ್ತು ಅವರ ಕುಟುಂಬಗಳು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು, ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಳ್ಳುತ್ತಿದ್ದರು. ಆದರೆ ಇಂದು ಎಲ್ಲರೂ ಅವರವರ ಮೊಬೈಲ್‌ನಲ್ಲಿ ಮೌನವಾಗಿ ಮುಳುಗಿದ್ದಾರೆ, ಕನಿಷ್ಟ ಸಂವಹನ ಕ್ರಿಯೆಯನ್ನೂ ಕೂಡ ಕಳೆದುಕೊಂಡಿದ್ದಾರೆ ಎಂದು ತಜ್ಞರು ವಿಷಾದಿಸಿದರು.
ಸಾಮಾಜಿಕ ಮಾಧ್ಯಮ ಬಳಕೆ ಎಂದಿಗೂ ತೃಪ್ತಿ ನೀಡದು. ಉದಾಹರಣೆಗೆ ನಾವು ಊಟ ಮಾಡಿದ ನಂತರ ಹೊಟ್ಟೆ ತುಂಬುತ್ತದೆ, ಸಿನಿಮಾ ನೋಡುವುದು ಕೂಡ ಒಂದು ಅವಧಿಯ ನಂತರ ಮುಗಿಯುತ್ತದೆ. ಆದರೆ ಒಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಮುಳುಗಿದರೆ ಹೊರಬರುವ ಸೂಚನೆಯೇ ಇರುವುದಿಲ್ಲ. ಸ್ಕ್ರೀನ್‌ಸ್ಕ್ರೋಲಿಂಗ್ ಮಾಡುವ ಕ್ರಿಯೆ ಮೆದುಳನ್ನು ಒಂದು ರೀತಿಯ ಯಂತ್ರದಂತೆ ಮಾಡಿಬಿಡುತ್ತದೆ. ಈ ಅಭ್ಯಾಸವನ್ನು ಬಿಡುವುದು ಎಲ್ಲಾ ವ್ಯಸನಕ್ಕಿಂತಲೂ ಹೆಚ್ಚು ಕಷ್ಟ ಎನ್ನುತ್ತಾರೆ ತಜ್ಞರು.
ಈ ರೀತಿಯ ಅವಲಂಬನೆಗೆ ಮುಖ್ಯ ಕಾರಣವೆಂದರೆ ಡೋಪಮೈನ್ (Dopamine), ಇದು ಪ್ರೇರಣೆ ಮತ್ತು ಪ್ರತಿಫಲಕ್ಕೆ ಕಾರಣವಾದ ಮೆದುಳಿನ ರಾಸಾಯನಿಕ ಅಂಶ. ವರ್ಣರಂಜಿತ ಚಿತ್ರ ಅಥವಾ ಮನರಂಜನೆಯ ರೀಲ್ಸ್ ವೀಕ್ಷಿಸಿದಾಗ ಮೆದುಳಿನಲ್ಲಿ ಡೊಪಮೈನ್ ಬಿಡುಗಡೆಯಾಗುತ್ತದೆ. ಅನೇಕ ಚಟುವಟಿಕೆಗಳಿಗೆ ಕೊನೆ ಎಂಬುದಿರುತ್ತದೆ ಆದರೆ ಈ ಸ್ಕ್ರೋಲಿಂಗ್ ಮಾಡುವ ಅಭ್ಯಾಸಕ್ಕೆ ಕೊನೆ ಎಂಬುದೇ ಇರುವುದಿಲ್ಲ. ನಮ್ಮ ಮೆದುಳು ವಿಶ್ರಾಂತಿಗಿಂತ ಹೆಚ್ಚಾಗಿ ದೃಶ್ಯ ಪ್ರಚೋದನೆಗೆ ಒಳಗಾಗಲು ಬಯಸುತ್ತದೆ. ಇದೇ ಡೂಮ್ ಸ್ಕ್ರೋಲಿಂಗ್‌ಗೆ ಕಾರಣವಾಗಿ, ದೀರ್ಘಕಾಲದ ಆಯಾಸ ಮತ್ತು ನಿಜ ಜೀವನದ ಎಲ್ಲಾ ಕೆಲಸಗಳಲ್ಲೂ ಆಸಕ್ತಿ ಕಡಿಮೆಯಾಗುವಂತೆ ಮಾಡುತ್ತದೆ.
ಈ ಡಿಜಿಟಲ್ ಯುಗದಲ್ಲಿ ಇನ್ನೊಬ್ಬರನ್ನು ನೋಡಿ ಅನುಸರಿಸುವ ಕ್ರಿಯೆ ಹೆಚ್ಚಾಗಿದೆ. ಹೇಗೆಂದರೆ ಮುಂಚೆ ಯಾರೋ ಹೊಸ ಕಾರು ತೆಗೆದುಕೊಂಡರೆ ಅಥವಾ ಹೊರಗೆ ಸುತ್ತಾಡಿದರೆ ತಕ್ಷಣವೇ ಇನ್ನೊಬ್ಬರಿಗೆ ತಿಳಿಯುತ್ತಿರಲಿಲ್ಲ. ಆದ್ರೆ ಈಗ ಜೀವನಶೈಲಿಯೇ ಬದಲಾಗಿದೆ, ಇನ್ನೊಬ್ಬರ ಜೀವನದ ಆಗುಹೋಗುಗಳು ಸಾಮಾಜಿಕ ತಾಲತಾಣಗಳಲ್ಲಿ ಲಭ್ಯವಿರುತ್ತದೆ. ಇದರಿಂದ ಇನ್ನೊಬ್ಬರ ಜೀವನ ಅನುಕರಣೆ ಮಾಡಲು ಪ್ರಯತ್ನಕ್ಕೆ ಮುಂದಾಗುತ್ತೇವೆ. ಇದರಿಂದ ಮೇಲು, ಕೀಳು ಎಂಬ ಭಾವನೆಗಳು ಹುಟ್ಟಿಕೊಳ್ಳುತ್ತವೆ. ಅಲ್ಲದೆ ಇಂದು ಏಕಾಂಗಿ ತನವನ್ನು ನಿಭಾಯಿಸುವ ಯಾವ ಸಾಮರ್ಥ್ಯವು ನಮ್ಮಲ್ಲಿ ಇಲ್ಲದಂತಾಗಿದೆ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮೊಬೈಲ್ ಮೊರೆ ಹೋಗುತ್ತೇವೆ, ಆದರೆ ಅದರಿಂದ ಆಂತಕ ಮತ್ತಷ್ಟು ಹೆಚ್ಚಾಗಿದೆ ಎನ್ನುತ್ತಾರೆ ತಜ್ಞರು.
ಹಾಗಾದ್ರೆ ಈ ಡಿಜಿಟಲ್ ವ್ಯಸನದಿಂದ ದೂರವಿರಲು ಏನು ಮಾಡಬೇಕು ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಈ ಪ್ರಶ್ನೆಗೆ ತಜ್ಞರು ಉತ್ತರಿಸಿದ್ದು, ಮೊಬೈಲ್ ಇಂದ ದೂರವಿರಲು ಬಯಸಿದರೆ ಸಾಲದು, ಅದಕ್ಕೆ ಉತ್ತಮ ಹವ್ಯಾಸಗಳನ್ನು ಸಹ ಹೊಂದಿರಬೇಕು. ಅದನ್ನು ದಕ್ಕಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದು ಮುಖ್ಯ ಎನ್ನುತ್ತಾರೆ ತಜ್ಞರು.
ಅನಗತ್ಯ ನೋಟಿಫಿಕೇಶನ್ ಆಫ್ ಮಾಡಿ: ಅತಿ ಮುಖ್ಯವಲ್ಲದ ಆ್ಯಪ್‌ಗಳ ನೋಟಿಫಿಕೇಶನ್ ಅನ್ನು ಆಫ್ ಮಾಡುವುದು
ಫೋನ್ ಬಳಕೆ ಇಲ್ಲದೆ ಸಮಯ ಕಳೆಯಿರಿ: ಉದ್ಯಾನವನಕ್ಕೆ ಹೋಗುವಾಗ, ದಿನಸಿ ಅಂಗಡಿಗೆ ಹೋಗುವಾಗ ಅಥವಾ ದೇವಸ್ಥಾನಕ್ಕೆ ಹೋಗುವಾಗ ಫೋನ್ ಒಯ್ಯಬೇಡಿ. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಗಮನಿಸುವುದನ್ನು ಮತ್ತೆ ಕಲಿಯಲು ಆರಂಭಿಸಿ.
ಸೃಜನಾತ್ಮಕ ಬಳಕೆ: ನೀವು ಫೋನ್ ಬಳಸುವಾಗ ಅದು ನಿಮಗೆ ಸಂತೋಷ ನೀಡುತ್ತಿದೆಯೇ ಅಥವಾ ಕಿರಿಕಿರಿ ಉಂಟುಮಾಡುತ್ತಿದೆಯೇ ಎಂದು ಗಮನಿಸಿ. ಹೆಚ್ಚಾಗಿ ಅದು ಕಿರಿಕಿರಿಯನ್ನೇ ಉಂಟುಮಾಡುತ್ತಿರುತ್ತದೆ.
ವೈದ್ಯರ ಮಾತು:
“ಆರಂಭದಲ್ಲಿ ಕಷ್ಟವೆನಿಸಿದರೂ ಸಹ ದೀರ್ಘಕಾಲದ ದೃಷ್ಟಿಯಿಂದ ಇದು ನಿಮ್ಮ ನಿದ್ರೆ, ಮಾನಸಿಕ ಆರೋಗ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ.” ಎನ್ನುತ್ತಾರೆ ತಜ್ಞ ಸುಭಾಷ್.
