ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ ಉಂಟಾಗಿದೆ.. ಕನ್ನಡದ ಯುವ ನಟ ಬಾಲರಾಜ್ ಇಹಲೋಕ ತ್ಯಜಿಸಿದ್ದಾರೆ.. ಕರಿಯ ಸಿನಿಮಾ ನಿರ್ಮಾಪಕ ಆನೇಕಲ್‌ ಬಾಲ್‌ರಾಜ್‌ನ ಪುತ್ರ, ನಟ ಸಂತೋಷ್‌ ಬಾಲರಾಜ್‌ ಚಿಕ್ಕ ವಯಸ್ಸಿನಲ್ಲೇ ಜೀವ ಬಿಟ್ಟಿದ್ದು, ಅಭಿಮಾನಿಗಳಿಗೆ ಬರ ಸಿಡಿಲೇ ಬಡಿದಂತಾಗಿದೆ. ತಂದೆ ಕಳೆದುಕೊಂಡಿದ್ದ ಕುಟುಂಬ ಈಗ ಕಣ್ಣೀರಲ್ಲಿ ಮುಳುಗಿದ್ದು, ಎಲ್ಲರ ಮನಕಲಕುವಂತಿದೆ.

ಕಾಡಿತ್ತು ಮಾರಕ ಕಾಯಿಲೆ!

ಕಳೆದ ಕೆಲ ದಿನಗಳಿಂದ ಸಂತೋಷ್‌ ಬಾಲರಾಜ್‌, ಅನಾರೋಗ್ಯದಿಂದ ಬಳಲುತ್ತಿದ್ದರು. ಜಾಂಡೀಸ್‌ ಕಾರಣದಿಂದಾಗಿ ಬನಶಂಕರಿಯ ಸಾಗರ್ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದರಿಂದ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಂತೋಷ್ ಬಾಲರಾಜ್ ನಿಧನ ಹೊಂದಿದ್ದಾರೆ.

ಸಂತೋಷ್‌ಗೆ ಬಂದಿದ್ದ ಜಾಂಡೀಸ್ ಕಾಯಿಲೆ ಅವರ ದೇಹವನ್ನೆಲ್ಲ ಆವರಿಸಿತ್ತು. ಕಳೆದ 2 ದಿನದಿಂದಲೂ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಯಕೃತ್ತು ಮತ್ತು ಕಿಡ್ನಿಯ ಸಮಸ್ಯೆಯಿಂದಾಗಿ ಅವರಿಗೆ ಜಾಂಡೀಸ್ ತಗುಲಿತ್ತು.. ಈ ಮೊದಲೂ ಸಹ ಸಂತೋಷ್ ಬಾಲರಾಜ್ ಅವರು ಜಾಂಡೀಸ್​ನಿಂದ ಬಳಲಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಕೈ ಮೀರಿ ಹೋಗಿದ್ದು, 38 ವರ್ಷಕ್ಕೇ ಕುಟುಂಬಸ್ಥರನ್ನೆಲ್ಲಾ ಬಿಟ್ಟು ಬಾರದೂರಿಗೆ ಪಯಣಿಸಿದ್ದಾರೆ.

ಸಂತೋಷ್‌ ಅವರ ತಂದೆ ದರ್ಶನ್ ಅಭಿನಯದ ಕರಿಯ ಸಿನಿಮಾದ ನಿರ್ಮಾಪಕ ಆನೇಕಲ್ ಬಾಲರಾಜ್ ಅವರು ಕಳೆದ ವರ್ಷವಷ್ಟೇ ನಿಧನ ಹೊಂದಿದ್ದರು. ಆ ನೋವಿನ ನಡುವೆಯೂ ಮದುವೆ ಆಗಲು ಸಿದ್ಧತೆಯನ್ನೂ ಮಾಡಿಕೊಂಡಿದ್ರು.. ಅಷ್ಟರಲ್ಲೇ ಜಾಂಡೀಸ್‌ ಕಾಯಿಲೆ ಸಂತೋಷ್‌ರ ಸಂತೋಷವನ್ನೇ ಕಸಿದುಕೊಂಡಿದೆ.. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಸಂತೋಷ್‌ರನ್ನ ಕಳೆದುಕೊಂಡು ಇದ್ದೊಬ್ಬ ತಂಗಿ ಮತ್ತು ತಾಯಿ ಮಮ್ಮಲ ಮರುಗುವಂತಾಗಿದೆ..

ಇನ್ನು ಸಂತೋಷ್‌ ಬಾಲರಾಜ್‌ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿದ್ದರು. ಕೆಂಪ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಸಂತೋಷ್‌, ಕರಿಯ 2, ಜನ್ಮ ಮತ್ತು ಗಣಪ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಸಂತೋಷ್ ನಟನೆಯ ಬರ್ಕ್ಲಿ ಮತ್ತು ಸತ್ಯಂ ಸಿನಿಮಾಗಳು ಬಿಡುಗಡೆ ಆಗಬೇಕಿವೆ. ಆದ್ರೆ ಇಷ್ಟರಲ್ಲೇ ಎಲ್ಲವನ್ನೂ ಬಿಟ್ಟು ಸಂತೋಷ್‌ ಸದ್ದಿಲ್ಲದೇ ಕಣ್ಮುಚ್ಚಿದ್ದು, ಇಡೀ ಚಿತ್ರರಂಗವನ್ನು ಕಣ್ಣೀರಲ್ಲಿ ಮುಳುಗಿಸಿದೆ..

ಸದ್ಯ ಸಂತೋಷ್‌ ಬಾಲರಾಜ್‌ ಅವರು ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರೋದು ಇಡೀ ಕುಟುಂಬ, ಜೀವನ ಪರ್ಯಂತ ಕೊರಗುವಂತಾಗಿದೆ.. ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಯುವ ನಟನ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ..

Share.
Leave A Reply