ಬರೋಬ್ಬರಿ 18 ವರ್ಷಗಳ ನಂತರ ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದಿತ್ತು. ಆರ್‌ಸಿಬಿ ಗೆಲುವು ಕಂಡು ಇಡೀ ಜಗತ್ತೇ ಸಂಭ್ರಮಿಸಿತ್ತು. ಆದರೆ ಆ ಗೆಲುವಿನ ಖುಷಿ ಹೆಚ್ಚು ಸಮಯ ಇರಲಿಲ್ಲ. ಕಪ್‌ ಗೆದ್ದ ಜಸ್ಟ್ 24 ಗಂಟೆಗಳಲ್ಲಿ ಶೋಕದ ವಾತಾವರಣ ಉಂಟಾಗಿತ್ತು. ಕಾರಣ, ಆಗ ತಾನೇ ಟ್ರೋಫಿ ಗೆದ್ದು ಬೆಂಗಳೂರಿಗೆ ಬಂದಿಳಿದಿದ್ದ ಆರ್‌ಸಿಬಿ ತಂಡದ ವಿಜಯೋತ್ಸವ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ಸಾವಿರಾರು ಮಂದಿ ಅಭಿಮಾನಿಗಳು ಬಂದಿದ್ದಾಗ ಕಾಲ್ತುಳಿತ ಉಂಟಾಗಿ ಅನೇಕ ಮಂದಿ ಸಾವನ್ನಪ್ಪಿದ್ದರು. ಆ ನಂತರ ಸಾಕಷ್ಟು ಬೆಳವಣಿಗೆಗಳು ಸಂಭವಿಸಿದವು.

ನಂತರ ಈ ದುರ್ಘಟನೆಗೆ ಸಂತಾಪ ಸೂಚಿಸಿದ್ದ ಆರ್‌ಸಿಬಿ ತಂಡ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಸೈಲೆಂಟ್ ಆಗಿತ್ತು. ಯಾವುದೇ ಒಂದು ಪೋಸ್ಟ್ ಹಾಕಿರಲಿಲ್ಲ. ಇದೀಗ ಬರೋಬ್ಬರಿ 3 ತಿಂಗಳ ನಂತರ ಆರ್‌ಸಿಬಿ ತಂಡ ತನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ನೀಡಿದೆ. ಬರೋಬ್ಬರಿ 85 ದಿನಗಳ ಬಳಿಕ ಆರ್‌ಸಿಬಿ ಪೋಸ್ಟ್‌ ಮಾಡಿದ್ದು, ಆತ್ಮೀಯ 12ನೇ ಮ್ಯಾನ್ ಆರ್ಮಿ, ಇದು ನಿಮಗೆ ನಮ್ಮ ಹೃದಯಪೂರ್ವಕ ಪತ್ರ! ಎಂದು ಶುರು ಮಾಡಿ ಅನೇಕ ವಿಚಾರಗಳನ್ನು ಹಂಚಿಕೊಂಡಿದೆ.

ಅಲ್ಲದೇ, ಇಲ್ಲಿ ನಾವು ಕೊನೆಯದಾಗಿ ಪೋಸ್ಟ್ ಮಾಡಿದ್ದು ಸುಮಾರು 3 ತಿಂಗಳುಗಳ ಹಿಂದೆ. ಈ ಮೌನ ನಮ್ಮ ಗೈರು ಹಾಜರಿಯಲ್ಲ. ಬದಲಿಗೆ ನಮ್ಮಲ್ಲಿ ದುಃಖ ತುಂಬಿತ್ತು. ಈ ಸ್ಥಳವು ಎಂದೆಂದಿಗೂ ಉತ್ಸಾಹ, ನೆನಪುಗಳು ಮತ್ತು ನಿಮಗೆ ಪ್ರಿಯವಾಗಿದ್ದ ಕ್ಷಣಗಳಿಂದ ತುಂಬಿರುತ್ತಿತ್ತು. ಆದರೆ ಜೂನ್ 4 ಎಲ್ಲವನ್ನೂ ಬದಲಾಯಿಸಿತು. ಆ ದಿನ ನಮ್ಮ ಹೃದಯವನ್ನು ಒಡೆಯಿತು. ದಿನದ ನಂತರದ ಮೌನವು, ನಾವು ನೋವನ್ನು ಹಂಚಿಕೊಂಡ ರೀತಿಯಾಗಿದೆ ಎಂದು ಆರ್‌ಸಿಬಿ ತಿಳಿಸಿದ್ದು, ಅಭಿಮಾನಿಗಳಿಗೆ ಹೊಸ ಹುರುಪು ತುಂಬಿದೆ.

Share.
Leave A Reply