ಧರ್ಮಸ್ಥಳ ಪ್ರಕರಣವೂ ದೇಶದಲ್ಲೇ ಸಂಚಲನ ಸೃಷ್ಟಿಸಿದೆ. ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸುತ್ತಮುತ್ತ ನಡೆದಿವೆ ಎನ್ನಲಾದ ಅಸಹಜ ಸಾವು ಪ್ರಕರಣಗಳ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲ ದಶಕಗಳಲ್ಲಿ ನಡೆದ ಅಸಹಜ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ಭಾರೀ ಒತ್ತಡ ಬಂದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ 4 ಸದಸ್ಯರ ಐಪಿಎಸ್ ಅಧಿಕಾರಿಗಳ ಎಸ್‌ಐಟಿಯನ್ನು ರಚಿಸಿದೆ.

ಎಸ್‌ಐಟಿಯಲ್ಲಿ ಯಾರೆಲ್ಲಾ ಅಧಿಕಾರಿಗಳು?

  • ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ಮಹಾನಿರ್ದೇಶಕ ಪ್ರಣವ್‌ ಮೊಹಾಂತಿ
  • ನೇಮಕಾತಿ ವಿಭಾಗದ ಡಿಐಜಿ ಎಂ.ಎನ್‌.ಅನುಚೇತ್‌
  • ಬೆಂಗಳೂರು ಸಿಎಆರ್‌ (ಕೇಂದ್ರ ಸ್ಥಾನ) ಡಿಸಿಪಿ ಡಾ.ಎಸ್‌.ಕೆ.ಸೌಮ್ಯಲತಾ
  • ಮಂಗಳೂರು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಜಿತೇಂದ್ರ ಕುಮಾರ್‌ ದಯಾಮ

ವಕೀಲರ ನಿಯೋಗದಿಂದ ಸಿಎಂ ಮನವಿ
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತ (BNS) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದಾಖಲಾಗಿರುವ ಅಪರಾಧ ಮತ್ತು “ಕರ್ನಾಟಕದಾದ್ಯಂತ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ/ದಾಖಲಾಗಲಿರುವ ಎಲ್ಲಾ ಇತರ ಕ್ರಿಮಿನಲ್ ಪ್ರಕರಣಗಳನ್ನು” ತನಿಖೆ ಮಾಡಲು “ವಿಶೇಷ ತನಿಖಾ ತಂಡವನ್ನು ರಚಿಸುವುದು ಸೂಕ್ತ” ಎಂದು ಶನಿವಾರ ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.

ಧರ್ಮಸ್ಥಳ ದೇಗುಲದಲ್ಲಿ ಸ್ವಚ್ಛತಾ ಕಾರ್ಯ ಮಾಡಿಕೊಂಡಿದ್ದ ವ್ಯಕ್ತಿ ನೂರಾರು ಅಪರಿಚಿತ ಶವ ಹೂತಿದ್ದೇನೆ ಎಂದು ಹೇಳುತ್ತಿದ್ದಾರೆ. ಧರ್ಮಸ್ಥಳದಲ್ಲಿ ನಡೆದಿರುವ ಸರಣಿ ಕೊಲೆ ಹಾಗೂ ಮೃತದೇಹಗಳ ಅಂತ್ಯಕ್ರಿಯೆ ಗೌಪ್ಯವಾಗಿ ನಡೆದಿರುವ ಪ್ರಕರಣದ ತನಿಖೆಗೆ SIT ತಂಡ ರಚಿಸಬೇಕೆಂಬ ವಕೀಲರ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತ್ತು. ಪ್ರಕರಣದ ತನಿಖೆಗೆ ಎಸ್‌ಐಟಿ ತಂಡ ರಚಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಸೇರಿದಂತೆ ಅನೇಕ ವಕೀಲರು ಸಿಎಂಗೆ ಮನವಿ ಸಲ್ಲಿಸಿದ್ದರು.

ಸಿಎಂ ಸಿದ್ದರಾಮಯ್ಯ ಆದೇಶದಲ್ಲೇನಿದೆ?
ಧರ್ಮಸ್ಥಳ ಠಾಣೆ ಹಾಗೂ ಈ ಸಂಬಂಧ ರಾಜ್ಯದ ಇತರೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಮತ್ತು ದಾಖಲಾಗುವ ಇತರೆ ಎಲ್ಲಾ ಕ್ರಿಮಿನಲ್‌ ಪ್ರಕರಣಗಳ ತನಿಖೆಯನ್ನು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು (ಡಿಜಿ-ಐಜಿಪಿ) ಈ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಬೇಕು. ಎಸ್‌ಐಟಿ, ತನಿಖೆಗೆ ಸಂಬಂಧಿಸಿದ ತನಿಖಾ ಪ್ರಗತಿಯನ್ನು ಆಗಾಗ್ಗೆ ಡಿಜಿ-ಐಜಿಪಿ ಅವರಿಗೆ ವರದಿ ಮಾಡಬೇಕು. ಪ್ರಕರಣಗಳ ಸಮಗ್ರ ತನಿಖೆ ನಡೆಸಿ, ತನಿಖಾ ವರದಿಯನ್ನು ಡಿಜಿ-ಐಜಿಪಿ ಮೂಲಕ ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಧರ್ಮಸ್ಥಳದಲ್ಲಿ ಶವಗಳ ವಿಲೇವಾರಿ ಪ್ರಕರಣ ಸಂಬಂಧ ಸಮಗ್ರ ತನಿಖೆಯಾಗಬೇಕೆಂದು ರಾಜ್ಯದೆಲ್ಲೆಡೆ ಒತ್ತಾಯ ಕೇಳಿ ಬಂದಿತ್ತು. ಈ ಮಧ್ಯೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದು, ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ರಚಿಸುವಂತೆ ಕೋರಿದ್ದರು. ಇದರ ಬೆನ್ನಲ್ಲೇ ಎಸ್‌ಐಟಿ ರಚಿಸಲಾಗಿದೆ.

ಏನಿದು ಪ್ರಕರಣ?
ಧರ್ಮಸ್ಥಳ ಗ್ರಾಮದ ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ಹಲವು ಶವಗಳನ್ನು ಹೂತಿಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ವ್ಯಕ್ತಿಯೋರ್ವ ತಾನೇ ಶವ ಹೂತಿಟ್ಟಿದ್ದೆ ಎಂದು ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share.
Leave A Reply