ಉತ್ತರಾಖಂಡ್‌ನಲ್ಲಿ ಮೇಘಸ್ಪೋಟ ಸಂಭವಿಸಿದೆ. ಉತ್ತರಕಾಶಿಯಲ್ಲಿ ಹಠಾತ್‌ ಪ್ರವಾಹ ಉಂಟಾಗಿದ್ದು, ಧರಾಲಿ ಗ್ರಾಮದ ಮುಕ್ಕಾಲು ಭಾಗ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಈ ಭೀಕರ ಪ್ರವಾಹಕ್ಕೆ ೫೦ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದು, ೫ಮಂದಿ ಸಾವನ್ನಪ್ಪಿದ್ದಾರೆ. ಎನ್‌ಡಿಆರ್ಎಫ್‌, ಎಸ್‌ಡಿಆರ್‌ಎಫ್‌, ಐಟಿಬಿಪಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ. ನಾಪತ್ತೆಯಾದ ೫೦ ಕ್ಕೂ ಹೆಚ್ಚು ಜನರಿಗೆ ಶೋಧ ಕಾರ್ಯ ನಡೆಸಲಾಗ್ತಿದೆ.

ಉತ್ತರಕಾಶಿಯ ಪರ್ವತ ಪ್ರದೇಶಗಳಲ್ಲಿ ಭಾರೀ ಮಳೆ ಪ್ರವಾಹದಿಂದಾಗಿ ಹಲವು ಮನೆಗಳು ಕೊಚ್ಚಿ ಹೋಗಿವೆ. ಗಂಗೋತ್ರಿ ಧಾಮ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ ಎಂದು ತಿಳಿದು ಬಂದಿದೆ. ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.

ಪ್ರವಾಹಕ್ಕೆ ಕೊಚ್ಚಿಹೋದ ಮನೆಗಳು:
ಉತ್ತರಕಾಶಿಯ ಧರಾಲಿ ಗ್ರಾಮದ ಬಳಿಯಿರುವ ಖೀರ್ ಗಡ್ ಪ್ರದೇಶದಲ್ಲಿ ಪ್ರವಾಹದಿಂದಾಗಿ ಮನೆಗಳು, ಅಂಗಡಿಗಳು, ಮಾರುಕಟ್ಟೆಗಳೆಲ್ಲವೂ ನೀರಿನಲ್ಲಿ ಕೊಚ್ಚಿಹೋಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಕೆಲವರು ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಮೇಘಸ್ಫೋಟ, ಭಾರೀ ಮಳೆ ಪ್ರವಾಹ ಪರಿಸ್ಥಿತಿಯಿಂದಾಗಿ ಮನೆಗಳು ನಾಶವಾಗಿರುವುದರಿಂದ ಬಹುತೇಕ ಜನರು ಅವಶೇಷಗಳಡಿ ಸಿಲುಕಿದ್ದಾರೆ.

ಮೇಘಸ್ಫೋಟದ ಬಗ್ಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಟ್ವೀಟ್
ಧರಾಲಿ (ಉತ್ತರಕಾಶಿ)ಯಲ್ಲಿ ಸಂಭವಿಸಿರುವ ಮೇಘಸ್ಫೋಟದಿಂದ ಭಾರೀ ಹಾನಿ ಉಂಟಾಗಿರುವ ಸುದ್ದಿ ತುಂಬಾ ದುಃಖಕರವಾಗಿದೆ. ಎನ್‌ಡಿಆರ್‌ಎಫ್, ಜಿಲ್ಲಾಡಳಿತ ಮತ್ತು ಇತರ ಸಂಬಂಧಿತ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಸಮಾರೋಪಾಡಿಯಲ್ಲಿ ತೊಡಗಿಸಿಕೊಂಡಿವೆ. ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಎಲ್ಲರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸುವೆ ಎಂದು ಮೇಘಸ್ಫೋಟದ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.

Share.
Leave A Reply