ದಕ್ಷಿಣ ಕನ್ನಡ: ಧರ್ಮಸ್ಥಳ ಬುರುಡೆ ಕೇಸ್ ಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದೆ. ವರದಿಯಲ್ಲಿ ಬುರುಡೆ ಗ್ಯಾಂಗ್ ನ ಷಡ್ಯಂತ್ರ ಬಟಾಬಯಲಾಗಿದೆ.
ಧರ್ಮಸ್ಥಳದ ಸುತ್ತಮುತ್ತ ‘ನೂರಾರು ಮಹಿಳೆಯರ ಶವಗಳನ್ನು ಹೂಳಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ತನ್ನ ಪ್ರಾಥಮಿಕ ವರದಿ ಸಲ್ಲಿಸಿದೆ. SIT ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿ ಧರ್ಮಸ್ಥಳದ ವ್ಯವಸ್ಥಾಪಕರಿಗೆ ಹಾಗೂ ಮೇಲ್ವಿಚಾರಕರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಅಲ್ಲದೇ, ಧರ್ಮಸ್ಥಳದಲ್ಲಿ ಅಂತಹ ಯಾವುದೇ ಕೃತ್ಯಗಳು ನಡೆದಿಲ್ಲ ಎಂದು ಕೂಡ ಎಸ್ ಐಟಿ ತನ್ನ ವರದಿಯಲ್ಲಿ ಹೇಳಿದೆ. ಇದೆಲ್ಲ ಆರೋಪಿಗಳ ಒಳಸಂಚು ಎಂಬುವುದನ್ನು ಎಸ್ ಐಟಿ ಹೇಳಿದೆ. ಹೀಗಾಗಿ ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ ಜಯಂತ್ ಮತ್ತು ಸುಜಾತಾ ಭಟ್ ಅಪರಾಧ ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ ಎಂದು SIT ತನಿಖೆಯಲ್ಲಿ ದೃಢಪಟ್ಟಿದೆ.
ಚಿನ್ನಯ್ಯನಿಗೆ ಹಣದ ಆಮಿಷ ತೋರಿಸಿ, ಆತನಿಂದ ‘ಅಪರಿಚಿತ ಶವಗಳನ್ನು ಹೂತಿದ್ದೇನೆ’ ಎಂದು ಸುಳ್ಳು ಹೇಳಿಸಿ, ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವುದು ಬಯಲಾಗಿದೆ. ಹಲವು ಸಾಕ್ಷ್ಯಾಧಾರಗಳ ಮೂಲಕ ಬುರುಡೆ ಗ್ಯಾಂಗ್ ವಿರುದ್ಧ ಎಸ್ ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ.
ಎಸ್ ಐಟಿಯು ಪ್ರಾಥಮಿಕ ವರದಿಯನ್ನು ಮಾತ್ರ ಕೋರ್ಟ್ ಗೆ ಸಲ್ಲಿಸಿದ್ದು, ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎನ್ನಲಾಗಿದೆ. ಹೀಗಾಗಿ ಸಮಯ ಕೋರಿದೆ. ಹಲವು ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಎಸ್ ಐಟಿ ಕೋರ್ಟ್ ಗೆ ಹೇಳಿದೆ. ಕೆಲವು ತಾಂತ್ರಿಕ ವರದಿಗಳು ಬರಬೇಕಿದೆ. ಈ ಎಲ್ಲ ಪ್ರಕ್ರಿಯೆ ಮುಗಿದ ನಂತರ ಎಸ್ ಐಟಿ ಸಂಪೂರ್ಣ ವರದಿಯನ್ನು ಕೋರ್ಟ್ ಗೆ ಸಲ್ಲಿಸಲಿದೆ ಎನ್ನಲಾಗಿದೆ. ಆದರೆ, ಬುರುಡೆ ವಿಷಯ ಮಾತ್ರ ಬರುಡೆ ಎಂಬುವುದನ್ನು ಎಸ್ ಐಟಿಯು ತನ್ನ ತನಿಖೆಯಿಂದ ಬಹಿರಂಗಪಡಿಸಿದೆ ಎನ್ನಲಾಗಿದೆ.
