ಬೆಂಗಳೂರು : ಅತಿಯಾದ್ರೆ ಅಮೃತವೂ ವಿಷವಂತೆ. ಹೀಗಿರೋವಾಗ ವಿಷಾನೇ ಅತಿಯಾದ್ರೆ? ಆ ಪರಿಸ್ಥಿತಿ ಇನ್ನು ಅಸಹನೀಯ ಅನ್ನಿಸುತ್ತೆ. ಫಾಸ್ಟ್‌ಫುಡ್‌ ವಿಚಾರವೂ ಹಾಗೆ. ಮೊದಲೇ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದ್ರಲ್ಲೂ ಪ್ರತೀ ದಿನ ಅದನ್ನೇ ತಿಂದು ಬದುಕಿದ್ರೆ, ಬದುಕು ಕಟ್ಟಿಕೊಳ್ಳೋ ಮುಂಚೆಯೇ ಚಟ್ಟ ಕಟ್ಟುವ ಪರಿಸ್ಥಿತಿ ಬರೋದ್ರಲ್ಲಿ ಡೌಟೇ ಇಲ್ಲ. ಇದಕ್ಕೆ ಉದಾಹರಣೆ ಎಂಬಂತೆ, 17 ವರ್ಷದ ಯುವತಿ ಫಾಸ್ಟ್‌ಫುಡ್‌ ತಿನ್ನುವ ಚಟಕ್ಕೆ ಬಿದ್ದು ತನ್ನ ಜೀವ ಕಳೆದುಕೊಂಡಿದ್ದಾಳೆ.

ಉತ್ತರ ಪ್ರದೇಶದ ಅಮ್ರೋಹಾ ನಗರದ 11 ನೇ ತರಗತಿಯ ವಿದ್ಯಾರ್ಥಿನಿ ಅತಿಯಾದ ಫಾಸ್ಟ್ ಫುಡ್ ಸೇವನೆಯಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಅಹಾನಾ ಎಂಬ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ದೀರ್ಘಕಾಲದ ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಅಹಾನಾಳ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು ಎಂದು ಏಮ್ಸ್ ವೈದ್ಯರು ತಿಳಿಸಿದ್ದಾರೆ. ವೈದ್ಯಕೀಯ ತಂಡದ ಪ್ರಕಾರ, ಆಕೆಯ ಕರುಳುಗಳು ಒಟ್ಟಿಗೆ ಅಂಟಿಕೊಂಡಿದ್ದವು. ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಗೊಳಗಾಗಿತ್ತು. ಇದರಿಂದಾಗಿ ಆಕೆಗೆ ಶಸ್ತ್ರಚಿಕಿತ್ಸೆ ಮಾಡಿದರೂ ಪ್ರಯೋಜನವಾಗಿಲ್ಲ.

ಚಿಕ್ಕ ವಯಸ್ಸಿನಿಂದಲೂ ಅಹಾನಾ ಚೌಮಿನ್, ಪಿಜ್ಜಾ ಮತ್ತು ಬರ್ಗರ್‌ಗಳಂತಹ ಫಾಸ್ಟ್ ಫುಡ್‌ಗಳನ್ನು ಇಷ್ಟಪಡುತ್ತಿದ್ದಳು. ಹೊರಗಿನ ಆಹಾರವನ್ನೇ ಹೆಚ್ಚು ಸೇವಿಸುತ್ತಿದ್ದಳು. ಮನೆಯ ಆಹಾರ ಆಕೆಗೆ ರುಚಿಸುತ್ತಿರಲಿಲ್ಲ. ಈ ಅಭ್ಯಾಸವು ಅಂತಿಮವಾಗಿ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಈ ಘಟನೆ ಅಮ್ರೋಹಾದ ಅಫ್ಘಾನ್ ಮೊಹಲ್ಲಾದಲ್ಲಿ ನಡೆದಿದ್ದು, ಕುಟುಂಬಸ್ಥರು ಮತ್ತು ಸ್ಥಳೀಯ ನಿವಾಸಿಗಳನ್ನು ಆಘಾತಕ್ಕೀಡು ಮಾಡಿದೆ.

ನವೆಂಬರ್ 28ರಂದು ಅಹಾನಾ ಆರೋಗ್ಯ ಹದಗೆಟ್ಟಿದೆ. ಅತಿಯಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅಹಾನಾಳನ್ನ ತಕ್ಷಣ ಅಮ್ರೋಹಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಆಕೆಯ ಪರಿಸ್ಥಿತಿ ಇನ್ನೂ ಕೆಟ್ಟದಾಗಿತ್ತು. ಅಲ್ಲಿಂದ ಮೊರಾದಾಬಾದ್‌ಗೆ ಕರೆದೊಯ್ಯಲಾಯಿತು. ಮೊರಾದಾಬಾದ್‌ನಲ್ಲಿ ನಡೆದ ವೈದ್ಯಕೀಯ ಪರೀಕ್ಷೆಗಳಲ್ಲಿ ಆಕೆಯ ಕರುಳಿಗೆ ಹಾನಿಯಾಗಿದ್ದು, ಹೊಟ್ಟೆಯಲ್ಲಿ ದ್ರವ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. ಡಾ.ರಿಯಾಜ್ ಶಸ್ತ್ರಚಿಕಿತ್ಸೆ ನಡೆಸಿ, ಆಕೆಯ ಹೊಟ್ಟೆಯಿಂದ ಸುಮಾರು 7 ಲೀಟರ್ ದ್ರವವನ್ನು ತೆಗೆದುಹಾಕಿದ್ದರು. ಅಹಾನಾ ಇದರಿಂದ ಸ್ವಲ್ಪ ಸುಧಾರಿಸಿಕೊಂಡಿದ್ದಳು, ನಂತರ ಅಲ್ಲಿಂದ ಆಕೆಯ ಚಿಕ್ಕಪ್ಪ ಸಾಜಿದ್ ಖಾನ್ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಕರೆದೊಯ್ದರು. ಚಿಕಿತ್ಸೆ ನೀಡುತ್ತಿದ್ದಂತೆಲ್ಲ ಆಕೆಯ ಸ್ಥಿತಿ ಹದಗೆಡುತ್ತಲೇ ಇತ್ತು. ಅಂತಿಮವಾಗಿ ಡಿಸೆಂಬರ್ 21ರಂದು ತಡರಾತ್ರಿ, ಆಕೆಯ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ವೈದ್ಯರ ಪ್ರಯತ್ನಗಳ ಹೊರತಾಗಿಯೂ, ಅಹಾನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.

ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ರಿಪೋರ್ಟ್ ಪ್ರಕಾರ, ಫಾಸ್ಟ್ ಫುಡ್ ಸೇವನೆ ಸೇರಿದಂತೆ ಅನಾರೋಗ್ಯಕರ ಆಹಾರ ಕ್ರಮಗಳಿಂದ ಪ್ರತಿ ವರ್ಷ ವಿಶ್ವದಾದ್ಯಂತ ಸುಮಾರು 11 ಮಿಲಿಯನ್ ಸಾವುಗಳಿಗೆ ಕಾರಣವಾಗುತ್ತವೆ ಅಂತಾ ವರದಿಯಾಗಿದೆ. JAMA ನೆಟ್‌ವರ್ಕ್ ಮತ್ತು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಂತಹ ಜರ್ನಲ್‌ಗಳಲ್ಲಿ ಪ್ರಕಟವಾದ ವೈದ್ಯಕೀಯ ಅಧ್ಯಯನಗಳ ಮೂಲಕ ಫಾಸ್ಟ್ ಫುಡ್ ಹೃದ್ರೋಗ, ಕ್ಯಾನ್ಸರ್, ಜೀರ್ಣಕಾರಿ ಅಸ್ವಸ್ಥತೆಗಳು ಮತ್ತು ಕರುಳಿನ ಆರೋಗ್ಯಕ್ಕೆ ದೀರ್ಘಕಾಲೀನ ಹಾನಿ ಉಂಟು ಮಾಡುತ್ತದೆ ಎಂಬ ಅಂಶ ತಿಳಿದುಬಂದಿದೆ.

Share.
Leave A Reply