ಬೆಂಗಳೂರು, ಫೆ.18 : ಕಾಂಗ್ರೆಸ್ ಸರ್ಕಾರದ ಅತ್ಯುತ್ತಮ ಕಾರ್ಯ ಅಂದ್ರೆ ಅದು ಪಂಚ ಗ್ಯಾರಂಟಿಗಳನ್ನು ಜಾರಿ ತಂದಿದ್ದು. ಕೋಟ್ಯಂತರ ಜನರು ಈ ಗ್ಯಾರಂಟಿಗಳಿಂದ ನೇರವಾಗಿ ಲಾಭ ಪಡೆಯುತ್ತಿದ್ದಾರೆ. ಯುವಶಕ್ತಿಯನ್ನು ಜಾಗೃತಗೊಳಿಸಿ, ಯುವಕರಲ್ಲಿ ಹೊಸ ಹುರುಪು ತುಂಬಲು ಜಾರಿಯಾಗಿದ್ದೇ ಯುವನಿಧಿ ಯೋಜನೆ. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆ ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಯುವ ಜನತೆ ಕೆಲಸಗಳಿಲ್ಲದ ಸಮಯದಲ್ಲಿ ಎದುರಿಸುತ್ತಿದ್ದ ಒತ್ತಡ, ಸಮಸ್ಯೆಗಳನ್ನು ಅರಿತ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನ ಜಾರಿ ತಂದಿದೆ. ಪದವಿ ಅಥವಾ ಡಿಪ್ಲೋಮಾ ಪೂರ್ಣಗೊಳಿಸಿದ ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಕಾರಣಕ್ಕೆ ಈ ಯೋಜನೆಯನ್ನು ಆರಂಭಿಸಲಾಗಿದೆ. ಈ ಮೂಲಕ ನಿರುದ್ಯೋಗಿ ಯುವಕ, ಯುವತಿಯರು ಉದ್ಯೋಗ ಪಡೆಯುವವರೆಗೆ ಸರ್ಕಾರದಿಂದ ಸಹಾಯಧನ ಪಡೆಯಲಿದ್ದಾರೆ. ರಾಜ್ಯದಲ್ಲಿ ಸುಮಾರು 3.08 ಲಕ್ಷಕ್ಕೂ ಅಧಿಕ ಮಂದಿ ಈ ಯೋಜನೆಯ ಲಾಭ ಪಡೆಯುತ್ತಿದ್ದು, ವಾರ್ಷಿಕವಾಗಿ 912 ಕೋಟಿ ರೂ. ಅನುದಾನ ಒದಗಿಸಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ನಿರುದ್ಯೋಗ ನಿವಾರಣೆಗೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಂತಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಈ ಯೋಜನೆ ಸಹ ಪ್ರಮುಖ ಕಾರಣ. ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ನಡುವೆ ಉದ್ಯೋಗ ಸಿಗುವವರೆಗೆ ಯುವನಿಧಿ ಯೋಜನೆಯಡಿ ಸಿಗುವ ಹಣಕಾಸಿನ ಸಹಾಯ ಅನೇಕರ ಜೀವನಕ್ಕೆ ಬೆಳಕಾಗಲಿದೆ. ಪದವಿ ಪೂರೈಸಿದವರು ಹಾಗೂ ಡಿಪ್ಲೋಮಾ ಮುಗಿಸಿದವರಿಗೆ 180 ದಿನಗಳು ಕಳೆದರೂ ಉದ್ಯೋಗ ಸಿಗಲಿಲ್ಲ ಅಂದ್ರೆ ಅಂತವರಿಗೆ ಈ ಯೋಜನೆ ಸಹಕಾರಿಯಾಗಲಿದೆ. ಪದವಿ ಪೂರೈಸಿದವರಿಗೆ ಮಾಸಿಕ 3000 ರೂ. ಹಾಗೂ ಡಿಪ್ಲೋಮಾ ಮುಗಿಸಿದವರಿಗೆ ಮಾಸಿಕ 1500 ರೂ. ಗಳಂತೆ 2 ವರ್ಷಗಳವರೆಗೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣವಾಗಿದೆ. ಒಂದು ವೇಳೆ ಉದ್ಯೋಗ ದೊರೆತರೆ ಅಥವಾ ಸ್ವಂತ ಉದ್ಯಮವನ್ನು ಆರಂಭಿಸಿದರೆ ಯುವನಿಧಿ ಮಾಸಿಕ ನಿರುದ್ಯೋಗ ಭತ್ಯೆ ಸ್ಥಗಿತ ಆಗಲಿದೆ. ಒಂದು ಕಡೆ ಮಹಿಳೆಯರ ಸಬಲೀಕರಣದ ಬಗ್ಗೆ ಗಮನ ಹರಿಸಿರುವ ಸರ್ಕಾರ ಗೃಹ ಲಕ್ಷ್ಮಿ, ಶಕ್ತಿ ಯೋಜನೆಗಳ ಮೂಲಕ ಯಶಸ್ಸು ಕಂಡಿದೆ. ಇತ್ತ ಯುವನಿಧಿ ಯೋಜನೆ ಮೂಲಕ ಯುವಶಕ್ತಿಗೆ ಮತ್ತಷ್ಟು ಪುಷ್ಟಿ ನೀಡಿ ಸಾರ್ಥಕತೆ ಮೆರೆದಿದೆ.
