ಪ್ರಸಕ್ತ ವರ್ಷದ ವಿಜಯ್ ಹಜಾರೆ ಟ್ರೋಫಿ ಪಂದ್ಯಗಳು ಹಲವಾರು ದಾಖಲೆಗಳಿಗೆ ಸಾಕ್ಷಿಯಾಗುತ್ತಿವೆ. ಟೂರ್ನಿಯ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಒಂದೇ ದಿನ 5 ಶತಕಗಳು ದಾಖಲಾಗಿವೆ.

ಸನೋಸರಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬರೋಡಾ ಹಾಗೂ ಹೈದರಾಬಾದ್ ತಂಡಗಳ ಮಧ್ಯೆ ಫೈಟ್ ನಡೆದಿತ್ತು. ಈ ಪಂದ್ಯದಲ್ಲಿ ಉಭಯ ತಂಡಗಳ ಒಟ್ಟು ಐವರು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಬರೋಡಾ ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದರು. ಪರಿಣಾಮ ತಂಡದ ಮೊತ್ತ ಬರೋಬ್ಬರಿ 417 ರನ್ ಆಗಿತ್ತು. ಕಠಿಣ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡದ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ಗಳಿಸಿದರು. ಒಂದೇ ಪಂದ್ಯದಲ್ಲಿ ಒಟ್ಟು ಐದು ಶತಕಗಳು ದಾಖಲಾಗಿದ್ದು, ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲಾಗಿದೆ.

ಬರೋಡಾ ಪರ ಅತ್ಯಧಿಕ ರನ್ಗಳ ಇನ್ನಿಂಗ್ಸ್ ಆಡಿದ ಆರಂಭಿಕ ಆಟಗಾರ ನಿತ್ಯಾ ಪಾಂಡ್ಯ 100 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 122 ರನ್ ಗಳಿಸಿದರೆ, ಮತ್ತೋರ್ವ ಆರಂಭಿಕ ಆರಂಭಿಕ ಅಮಿತ್ ಪಾಸಿ 93 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ 127 ರನ್ ಗಳಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 230 ರನ್ಗಳ ಜೊತೆಯಾಟ ನೀಡಿದರು. ನಂತರ ತಂಡದ ನಾಯಕ ಕೃನಾಲ್ ಪಾಂಡ್ಯ ಕೂಡ 63 ಎಸೆತಗಳಲ್ಲಿ 18 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ ಅಜೇಯ 109 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ಹೈದರಾಬಾದ್ ಪರ ಅಭಿರತ್ ರೆಡ್ಡಿ ಕೇವಲ 90 ಎಸೆತಗಳಲ್ಲಿ 18 ಬೌಂಡರಿ ಮತ್ತು ಎರಡು ಸಿಕ್ಸರ್ ಸೇರಿದಂತೆ 130 ರನ್ ಗಳಿಸಿದರು. ಪ್ರಜ್ಞಾಯ್ ರೆಡ್ಡಿ ಕೂಡ 98 ಎಸೆತಗಳಲ್ಲಿ 113 ರನ್ ಗಳಿಸಿದರು. ಆದರೆ, ಇನ್ನುಳಿದ ಆಟಗಾರರು ಕೈ ಚೆಲ್ಲಿದ್ದರಿಂದಾಗಿ ಗುರಿ ಮುಟ್ಟಲು ಆಗದೆ ಹೈದರಾಬಾದ್ 380 ರನ್‌ ಗಳಿಸಿ ಸೋಲೋಪ್ಪಿಕೊಂಡಿತು.

Share.
Leave A Reply