ಪಂಜಾಬ್ ಕಿಂಗ್ಸ್ ವಿರುದ್ದ ಭರ್ಜರಿ ಗೆಲುವು ಸಾಧಿಸಿದ RCB ತಂಡಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ನಮ್ಮ ರಾಜ್ಯಕ್ಕೆ ಆರ್ ಸಿಬಿ ತಂಡದ ಹುಡುಗರು ಗೌರವ ಹಾಗೂ ಹೆಮ್ಮೆ ತಂದಿದ್ದಾರೆ. ಈ ಕಾರಣಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಆರ್ ಸಿ ಬಿ ತಂಡಕ್ಕೆ ನಾವು ಗೌರವ ಸಲ್ಲಿಸಬೇಕು. ಯಾವ ರೀತಿ ಅವರನ್ನು ಗೌರವಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆಗೆ ಯಾವ ರೀತಿಯಲ್ಲಿ ಸಮಸ್ಯೆ ಆಗಬಾರದು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರಿನಲ್ಲಿ ಗೆಲುವಿನ ಸಂಭ್ರಮಾಚರಣೆ ಮಾಡುವ ಬಗ್ಗೆ ಆರ್ ಸಿ ಬಿ ತಂಡದವರು ಶೆಡ್ಯೂಲ್ಡ್ ಹಾಕಿಕೊಂಡಿರ ಬಹುದು. ಆದರೆ, ಪರಿಸ್ಥಿತಿಯನ್ನು ಇಲ್ಲಿ ನಿಯಂತ್ರಣ ಮಾಡುವವರು ನಾವಲ್ಲವೇ? ಗೃಹ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಇಂದು ವಿಕ್ಟರಿ ಪರೇಡ್ ಮೂಲಕ ಬೆಂಗಳೂರಿನ ಬೀದಿಗಳಲ್ಲಿ RCB ಅಭಿಮಾನಿಗಳು ಗೆಲುವನ್ನು ಸಂಭ್ರಮಿಸಲು ಸರ್ಕಾರ ಅವಕಾಶ ನೀಡುತ್ತಾರೋ ಇಲ್ಲವೋ ಎಂಬುವುದು ಇನ್ನು ಅಧಿಕೃತವಾಗಿಲ್ಲ.
