ಕಾಲ್ತುಳಿತದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಮೊದಲು ಬಿಜೆಪಿಯವರು ತಾವು ಮಾಡಿರುವ ಘೋರ ಅಪರಾಧಗಳಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ನಿನ್ನೆ ಮಹಾರಾಷ್ಟ್ರದಲ್ಲಿ ಪೊಲೀಸ್ ಠಾಣೆಯ ಮುಂದೆ ಜನ ಜಮಾಯಿಸಿ 5 ಮಂದಿ ಮೃತಪಟ್ಟಿದ್ದಾರೆ. ಅದರ ಬಗ್ಗೆ ಯಾವುದೇ ರಾಷ್ಟ್ರೀಯ ಮಾಧ್ಯಮಗಳು ಚರ್ಚೆ ಮಾಡುತ್ತಿಲ್ಲ. ಅಲ್ಲಿನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ನಡೆಸಿ ಘಟನೆ ಬಗ್ಗೆ ಮಾಹಿತಿ ನೀಡಿಲ್ಲ. ಬಿಜೆಪಿಯವರಾರೂ ರಾಜೀನಾಮೆ ಕೇಳಿಲ್ಲ, ಉತ್ತರ ಪ್ರದೇಶದ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಈವರೆಗೂ ಪರಿಹಾರ ನೀಡಿಲ್ಲ ಎಂದು ನ್ಯಾಯಾಲಯ ಛೀಮಾರಿ ಹಾಕಿದೆ.

ಕುಂಭಮೇಳ ಕಾಲ್ತುಳಿತಕ್ಕೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಲೀ ಕಾರ್ಯಕ್ರಮ ಆಯೋಜನೆ ಮಾಡಿ ಸಾಧಿಸಿದ್ದೇವೆ ಎಂದು ಬಿಂಬಿಸಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಬೇರೆ ಯಾರಾದರೂ ರಾಜೀನಾಮೆ ಕೊಟ್ಟಿದ್ದಾರೆಯೇ? ಎಂದು ಪ್ರಶ್ನಿಸಿದರು.

ಇಂತಹ ಘೋರಾತಿಘೋರ ಅಪರಾಧಗಳನ್ನು ಮಾಡಿರುವ ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ನಮ್ಮ ಸರ್ಕಾರದ ರಾಜೀನಾಮೆ ಕೇಳುತ್ತಾರೆ ಎಂದು ಕಿಡಿಕಾರಿದರು.

ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ನೀಡಿದ್ದ ಹೇಳಿಕೆಯನ್ನು ತಿರುಚಿ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಹೇಳಿಕೆಗಳನ್ನು ತಿರುಚುವುದರಲ್ಲಿ ಅವರು ನಿಸ್ಸಿಮರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮ ಸರ್ಕಾರದ್ದಾಗಿರಲಿಲ್ಲ. ಖಾಸಗಿ ಸಂಸ್ಥೆಯವರ ಪತ್ರ ಆಧರಿಸಿ ಸಿಬ್ಬಂದಿಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿ. ಈ ರೀತಿ ಹೇಳಿರುವುದರಲ್ಲಿ ಮುಖ್ಯಮಂತ್ರಿ ಯವರ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ವಿಧಾನಪರಿಷತ್‌ ಸದಸ್ಯರ ನೇಮಕಾತಿ, ಕಾಲ್ತುಳಿತ ಪ್ರಕರಣ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಹೈಕಮಾಂಡ್‌ರೊಂದಿಗೆ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿದೆ, ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಎಂಬ ವದಂತಿಗಳು ಎಲ್ಲಿಂದ ಹುಟ್ಟಿಕೊಂಡವು ಎಂಬುದು ತಮಗೆ ಗೊತ್ತಿಲ್ಲ ಎಂದರು. ನಮ್ಮದು ಜವಾಬ್ದಾರಿಯುತ ಹಾಗೂ ಪ್ರಬುದ್ಧ ಸರ್ಕಾರ. ಬಿಜೆಪಿಯವರಂತೆ ಹೆದರಿ ಹೇಡಿತನದಿಂದ ಓಡಿ ಹೋಗುವುದಿಲ್ಲ ಎಂದು ಹೇಳಿದರು.

Share.
Leave A Reply