ಅಹಮದಾಬಾದ್‌ ವಿಮಾನ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ದೇಶ ಮಾತ್ರವಲ್ಲ ಇಡೀ ವಿಶ್ವವೇ ಈ ಅವಘಡಕ್ಕೆ ಮರುಕ ಪಡುತ್ತಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಇಡೀ ವಿಶ್ವವೇ ಕಂಬನಿ ಮಿಡಿಯುತ್ತಿದ್ದು, ವಿಶ್ವ ಕ್ರಿಕೆಟ್​ ಕೂಡ ಮೌನಾಚರಣೆಯೊಂದಿಗೆ ಗೌರವ ಸಲ್ಲಿಸಿದೆ. ಇದೆಲ್ಲದರ ನಡುವೆ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.

ಐಪಿಎಲ್ ಮೂಲಕ ಇಡೀ ಭಾರತದಲ್ಲೇ ಮನೆ ಮಾತಾಗಿದ್ದ ವಾರ್ನರ್​ ಅವರನ್ನು ಅಪಾರವಾಗಿ ಪ್ರೀತಿಸುವ ಬಳಗ ಭಾರತದಲ್ಲಿದೆ. ಇದಕ್ಕೆ ಪೂರಕವಾಗಿ ವಾರ್ನರ್ ಕೂಡ ಅವಕಾಶ ಸಿಕ್ಕಾಗಲೆಲ್ಲ ಭಾರತದ ಮೇಲೆ ತನಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಅದೇ ವಾರ್ನರ್, ಈ ವಿಮಾನ ದುರಂತದಿಂದ ಆಘಾತಕ್ಕೊಳಗಾಗಿದ್ದು, ಇನ್ನು ಮುಂದೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಬೆಳೆಸದಿರಲು ನಿರ್ಧಾರಿಸಿದ್ದಾರೆ.

ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಹೃದಯವಿದ್ರಾವಕ ಘಟನೆಯ ನಂತರ ಡೇವಿಡ್ ವಾರ್ನರ್ ಸ್ವತಃ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಹಲವು ವಿಚಾರಗಳ ಬಗ್ಗೆ ಬರೆದುಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಹಮದಾಬಾದ್ ವಿಮಾನ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ವಾರ್ನರ್, ಮೊದಲನೆಯದಾಗಿ, ಅವರು ಇಡೀ ಘಟನೆಯನ್ನು ದುಃಖಕರ ಎಂದು ಕರೆದಿದ್ದಾರೆ. ಮುಂದುವರೆದು, ನಾನು ನನ್ನ ಇಡೀ ಕುಟುಂಬದೊಂದಿಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಲು ಉದ್ದೇಶಿಸಿದ್ದೆ, ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ. ನಾನು ಮತ್ತೆ ಎಂದಿಗೂ ಏರ್ ಇಂಡಿಯಾದಲ್ಲಿ ಪ್ರಯಾಣಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಡೇವಿಡ್ ವಾರ್ನರ್ ಅವರ ಈ ಹೇಳಿಕೆಗೆ ಕಾರಣ ಏರ್ ಇಂಡಿಯಾದ ಮಾಜಿ ಸಿಬ್ಬಂದಿಯೊಬ್ಬರು ದೋಷಪೂರಿತ ವಿಮಾನಗಳ ನಿರಂತರ ಬಳಕೆಯ ಬಗ್ಗೆ ಮಾಡಿದ ಆರೋಪ. ವಾರ್ನರ್ ಮತ್ತೊಂದು ಬೋಯಿಂಗ್ ವಿಮಾನ ಅಪಘಾತಕ್ಕೀಡಾಗಿದೆ ಎಂದು ತಿಳಿಸಿದ ಮತ್ತೊಂದು ಸುದ್ದಿಯನ್ನು ಪೋಸ್ಟ್ ಮಾಡಿದ್ದಾರೆ. ಈ ರೀತಿ ಮುಗ್ಧ ಜನರ ಜೀವದ ಜೊತೆ ಆಟವಾಡುವ ಮೂಲಕ ಲಾಭ ಗಳಿಸುವುದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ವಾರ್ನರ್ ಬರೆದುಕೊಂಡಿದ್ದಾರೆ.

Share.
Leave A Reply