ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಧ್ಯೆ ಮಹತ್ವದ ಚರ್ಚೆ ನಡೆದಿದೆ. ಈ ಚರ್ಚೆಯಲ್ಲಿ 88 ನಿಮಿಷಗಳ ಕಾಲ ಮಾತುಕತೆ ನಡೆದಿದೆ ಎನ್ನಲಾಗಿದೆ.
ಮೂವರು ನಾಯಕರು ಮುಖ್ಯ ಮಾಹಿತಿ ಆಯುಕ್ತರು ಹಾಗೂ ಮಾಹಿತಿ ಆಯುಕ್ತರ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆದರೆ, ಪ್ರಧಾನಿ ನಿರ್ಧಾರಕ್ಕೆ ರಾಹುಲ್ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಭೆಯು ಬುಧವಾರ ನಡೆದಿದೆ ಎನ್ನಲಾಗಿದೆ. ಚರ್ಚೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಎಲ್ಲ ನೇಮಕಾತಿಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಲಿಖಿತವಾಗಿಯೂ ತಮ್ಮ ವಿರೋಧ ತೋರಿಸಿದ್ದಾರೆ ಎನ್ನಲಾಗಿದೆ. ಖರ್ಗೆ ಕೂಡ ಲಿಖಿತ ಆರೋಪ ಮಾಡಿದ್ದರು ಎನ್ನಲಾಗಿದೆ.
ಭಾರತದ ಜನಸಂಖ್ಯೆಯ ಸುಮಾರು ಶೇ. 90ರಷ್ಟು ಜನಸಂಖ್ಯೆಯನ್ನು ಹೊಂದಿರುವ ಸಮುದಾಯಗಳು ಹುದ್ದೆಗಳ ಪ್ರಸ್ತಾವಿತ ಪಟ್ಟಿಯಿಂದ ಪ್ರಾಯೋಗಿಕವಾಗಿ ಕಾಣೆಯಾಗಿವೆ ಎಂದು ರಾಹುಲ್ ವಿರೋಧಿಸಿದ್ದಾರೆ. ದಲಿತ, ಆದಿವಾಸಿ, ಒಬಿಸಿ/ಇಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಭ್ಯರ್ಥಿಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಸೂಚಿಸಿದ ಅಭ್ಯರ್ಥಿಗಳ ಹೆಸರುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಎಂಟು ಮಾಹಿತಿ ಆಯುಕ್ತರು ಮತ್ತು ಒಬ್ಬ ವಿಜಿಲೆನ್ಸ್ ಆಯುಕ್ತರ ನೇಮಕಾತಿಗಳ ಬಗ್ಗೆಯೂ ಆಗಿತ್ತು ಎಂದು ತಿಳಿದುಬಂದಿದೆ. ಈ ಅಧಿಕಾರಿಯು RTI ಅರ್ಜಿದಾರರ ದೂರುಗಳು ಮತ್ತು ಮೇಲ್ಮನವಿಗಳನ್ನು ನೋಡಿಕೊಳ್ಳುತ್ತಾರೆ. ಹಿರಾಲಾಲ್ ಸಮಾರಿಯಾ ಅವರು ಸೆಪ್ಟೆಂಬರ್ 13 ರವರೆಗೆ ಭಾರತದ ಮುಖ್ಯ ಮಾಹಿತಿ ಆಯುಕ್ತರಾಗಿದ್ದರು. ನಂತರ ಹುದ್ದೆ ಖಾಲಿಯಾಗಿದೆ. ಆದರೆ, ರಾಹುಲ್ ಗಾಂಧಿ ಶಾರ್ಟ್‌ಲಿಸ್ಟ್ ಮಾಡಿದ ಹೆಸರುಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಡೆ ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಎಸ್ಸಿ, ಎಸ್ಟಿ ಹಾಗೂ ಒಬಿಸಿ, ಅಲ್ಪಸಂಖ್ಯಾತರನ್ನು ಹೊರಗಿಡುವ ವ್ಯವಸ್ಥಿತಿ ಸಂಚು ಎಂದು ರಾಹುಲ್ ಆರೋಪಿಸಿದ್ದಾರೆ.
