ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಅವರು ಬರೋಬ್ಬರಿ 12 ವರ್ಷಗಳ ನಂತರ ಮತ್ತೊಮ್ಮೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA)ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೆಎಸ್ ಸಿಎಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಇಂದು ಹೊರ ಬಿದ್ದಿದ್ದು, ವೆಂಕಟೇಶ್ ಪ್ರಸಾದ್ (Venkatesh Prasad) ಗೆಲುವು ಕಂಡಿದ್ದಾರೆ. ಕೆಎಸ್ ಸಿಎಗೆ ಇಂದೇ ಮತದಾನ ನಡೆದಿತ್ತು. ಮತದಾನ ನಡೆದ ನಂತರ ಫಲಿತಾಂಶ ಹೊರ ಬಿದ್ದಿದ್ದು, ವೆಂಕಟೇಶ್ ಪ್ರಸಾದ್ 191 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿದಂತೆ ಒಟ್ಟು 16 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿತ್ತು. ಒಟ್ಟು 1,315 ಮತಗಳು ಚಲಾವಣೆಯಾಗಿವೆ. ಸಂಜೆಯ ನಂತರ ಮತದಾನ ಎಣಿಕೆ ಆರಂಭವಾಗಿ ಈಗ ಫಲಿತಾಂಶ ಹೊರ ಬಿದ್ದಿದೆ. ಮಾಜಿ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್ ಹಾಗೂ ಅನಿಲ್ ಕುಂಬ್ಳೆ ಬಣದ ವೆಂಕಟೇಶ್ ಪ್ರಸಾದ್‌ಗೆ ಒಟ್ಟು 749 ಮತಗಳು ಬಿದ್ದಿದ್ದರೆ, ಬ್ರಿಜೇಶ್ ಪಾಟೀಲ್ ಬಣದ ಶಾಂತಕುಮಾರ್‌ಗೆ 558 ಮತಗಳು ಸಿಕ್ಕಿವೆ. ಹೀಗಾಗಿ ವೆಂಕಟೇಶ್ ಪ್ರಸಾದ್ 191 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ವೆಂಕಟೇಶ್ ಪ್ರಸಾದ್ 2010ರಿಂದ 2013ರ ವರೆಗೆ ಕೆಎಸ್ ಸಿಎ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆ ವೇಳೆ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದರು. ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿದ್ದರು. ಈಗ ಮತ್ತೆ 12 ವರ್ಷಗಳ ನಂತರ ಕುಂಬ್ಳೆ, ಜಾವಗಲ್ ಶ್ರೀನಾಥ್ ಬಣದ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಲ್ಲದೇ, ವೆಂಕಟೇಶ್ ಪ್ರಸಾದ್ ಬಣದಿಂದ ಸುಜಿತ್ ಸೋಮಸುಂದರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಮಧುಕರ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಕೆಎಸ್‌ಸಿಎ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮೆನನ್ ಗೆದ್ದಿದ್ದಾರೆ.
ಪರಾಜಿತ ಅಥ್ಯರ್ಥಿ ಶಾಂತಕುಮಾರ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ವೆಂಕಟೇಶ್ ಪ್ರಸಾದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಶಾಂತಕುಮಾರ್ ಅವರು ಕೋರ್ಟ್ ಮೊರೆ ಹೋಗಿದ್ದು, ಶಾಂತಕುಮಾರ್ ಅವರ ನಾಮಪತ್ರ ಸಿಂಧುಗೊಳಿಸಿ ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು. ಹೀಗಾಗಿ ಚುನಾವಣೆ ನಡೆದಿದ್ದು, ಚುನಾವಣೆಯಲ್ಲೂ ಶಾಂತಕುಮಾರ್ ಸೋಲು ಕಂಡಿದ್ದಾರೆ.
ವೆಂಕಟೇಶ್ ಪ್ರಸಾದ್, 1994ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳ ಪ್ರವೇಶಿಸಿದ್ದರು. 33 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಅವರು 96 ವಿಕೆಟ್ ಗಳಿಸಿದ್ದರೆ, 161 ಏಕದಿನ ಪಂದ್ಯ ಆಡಿ 196 ವಿಕೆಟ್ ಕಬಳಿಸಿದ್ದಾರೆ.
