ಬೆಂಗಳೂರು, ಫೆ.12: ಎಂಥದ್ದೇ ಭವ್ಯವಾದ ಬಂಗಲೆ ಇದ್ದರೂ ಸಹ ಅಬ್ಬಬ್ಬಾ ಅಂದ್ರೆ ನೂರು, ಇನ್ನೂರು ಕೋಟಿ ಅಥವಾ 500 ಕೋಟಿ ರೂ. ಬೆಲೆ ಕಟ್ಟಬಹುದು. ಆದರೆ, ಇಲ್ಲೊಂದು ಭವ್ಯವಾದ ಬಂಗಲೆಯನ್ನು ಬರೋಬ್ಬರಿ ಸಾವಿರ ಕೋಟಿಗೆ ಮಾರಾಟಕ್ಕೆ ಇಡಲಾಗಿದೆ. ಹೌದು, ದೆಹಲಿಯ ಹೃದಯಭಾಗದಲ್ಲಿರುವ ಪ್ರಾಪರ್ಟಿಯೊಂದನ್ನ ಬರೋಬ್ಬರಿ 1000 ಕೋಟಿ ರೂಪಾಯಿಗೆ ಮಾರಾಟಕ್ಕಿಡಲಾಗಿದೆ. ತೆಹ್ರಿ ಗರ್ವಾಲ್ ರಾಜಮನೆತನಕ್ಕೆ ಸೇರಿದ ಈ ಬಂಗಲೆಯನ್ನು ಈಗಿನ ಮಹಾರಾಜ ಮನುಜೇಂದ್ರ ಶಾ ಅವರು ಮಾರಾಟಕ್ಕಿಟ್ಟಿದ್ದಾರೆ.

ಭಗವಾನ್ ದಾಸ್ ರಸ್ತೆಯಲ್ಲಿರುವ 3.2 ಎಕರೆ ವಿಸ್ತೀರ್ಣದ ಅದ್ಭುತವಾದ ಎಸ್ಟೇಟ್ ತೆಹ್ರಿ ಗರ್ವಾಲ್ ಕುಟುಂಬದ ಶಾಶ್ವತ ರಾಜ ಪರಂಪರೆಗೆ ಸಾಕ್ಷಿಯಾಗಿದೆ. ಸರಿಸುಮಾರು 12 ಸಾವಿರದ 950 ಚದರ ಮೀಟರ್‌ಗಳಷ್ಟು ವಿಸ್ತೀರ್ಣದಲ್ಲಿರುವ ಈ ಬಂಗಲೆ ಲುಟ್ಯೆನ್ಸ್ ಬಂಗಲೆ ವಲಯದಲ್ಲಿನ ಪ್ರಮುಖ ಆಸ್ತಿಗಳಲ್ಲಿ ಒಂದಾಗಿದೆ. ಬಿಜೆಪಿ ಲೋಕಸಭಾ ಸದಸ್ಯೆ ಮತ್ತು ರಾಜಮನೆತನದ ಸದಸ್ಯೆ ಮಾಲಾ ರಾಜ್ಯಲಕ್ಷ್ಮಿ ಶಾ ಅವರ ನಿವಾಸ ಇದಾಗಿದ್ದು, ಈ ಬಂಗಲೆಯನ್ನು ಖರೀದಿಸಲು ಉದ್ಯಮಿಯೊಬ್ಬರು ಮುಂದೆ ಬಂದಿದ್ದಾರೆ ಎನ್ನಲಾಗಿದೆ.

ಖರೀದಿದಾರ ಆಹಾರ ಮತ್ತು ಪಾನೀಯ ಉದ್ಯಮದಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿರುವ ಸ್ಥಳೀಯ ಉದ್ಯಮಿ ಎಂದು ವರದಿಯಾಗಿದೆ. ಇನ್ನು, ಮಹಾರಾಜ ಮನುಜೇಂದ್ರ ಶಾ ಅವರು ಐತಿಹಾಸಿಕ ರಾಜಮನೆತನದ ರಾಜ್ಯವಾದ ತೆಹ್ರಿ ಗರ್ವಾಲ್‌ನ 7ನೇ ಮತ್ತು ಪ್ರಸ್ತುತ ಮಹಾರಾಜರಾಗಿದ್ದಾರೆ.

Share.
Leave A Reply