ಲಕ್ನೋ: ನಾಯಿ ದೀರ್ಘಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದೆ ಎಂದು ಮನನೊಂದ ಸಹೋದರಿಯರಿಬ್ಬರು ಫಿನೈಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆಯು ಲಕ್ನೋದ ದೌಡಾ ಪ್ರದೇಶದಲ್ಲಿ ನಡೆದಿದೆ. ಸಹೋದರಿಯರಿಬ್ಬರೂ ಪದವೀಧರರು ಎನ್ನಲಾಗಿದೆ. ಆದರೆ, ನಾಯಿ ಹಲವು ದಿನಗಳಿಂದ ನೋವು ಪಡುವುದನ್ನು ಕಂಡು ಮನನೊಂದು ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಹಲವು ದಿನಗಳಿಂದ ಸಹೋದರಿಯರಿಬ್ಬರೂ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸಹೋದರಿಯರು 2014 ರಿಂದಲೂ ದೀರ್ಘಕಾಲದ ಖಿನ್ನತೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು.

ಇತ್ತೀಚೆಗೆ ತಮ್ಮ ಸಾಕು ನಾಯಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಅದರ ಸ್ಥಿತಿ ಸುಧಾರಿಸದ ಕಾರಣ ಇಬ್ಬರೂ ತೀವ್ರ ಭಾವನಾತ್ಮಕ ಒತ್ತಡ ಹಾಗೂ ಮನೋವೇದನೆಗೆ ಒಳಗಾಗಿದ್ದರು. ತಾಯಿ ಹೊರಗೆ ಹೋದಾಗ ಫಿನೈಲ್ ಸೇವಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಯಿ ಹೊರಗಿನಿಂದ ಬರುತ್ತಿದ್ದಂತೆ ಮಕ್ಕಳು ಒದ್ದಾಡುವುದನ್ನು ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share.
Leave A Reply