ಅಮರನಾಥ ಯಾತ್ರೆಗಾಗಿ ತೆರಳುತ್ತಿದ್ದ ಬಸ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಕಾಶ್ಮೀರದ ರಾಂಬನ್‌ನ ಚಂದರ್‌ಕೋಟ್ ಲಂಗರ್ ಪಾಯಿಂಟ್‌ನಲ್ಲಿ ಐದು ಬಸ್‌ಗಳ ನಡುವೆ ಅಪಘಾತ ಸಂಭವಿಸಿ, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಆಕ್ಸಿಡೆಂಟ್‌ನಲ್ಲಿ ಗಾಯಗೊಂಡವರನ್ನ ಡಿಎಚ್ ರಾಂಬನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಅಮರನಾಥ ಯಾತ್ರೆಗಾಗಿ ಭಕ್ತರು ಐದು ಬಸ್‌ಗಳ ಮೂಲಕ ಪಹಲ್ಲಾಮ್‌ಗೆ ತೆರಳುತ್ತಿದ್ದರು. ಈ ವೇಳೆ ಲಂಗರ್ ಪಾಯಿಂಟ್‌ನಲ್ಲಿ ನಾಲ್ಕು ಬಸ್‌ಗಳು ನಿಂತಿದ್ದವು. ಇದೇ ಸಂದರ್ಭದಲ್ಲಿ ಯಾತ್ರೆಯ ಬೆಂಗಾವಲು ಪಡೆಯ ಬಸ್‌ನ ಬ್ರೇಕ್ ಫೇಲ್ ಆಗಿ, ನಿಯಂತ್ರಣ ಕಳೆದುಕೊಂಡು ಇನ್ನುಳಿದ ಬಸ್‌ಗಳಿಗೆ ಡಿಕ್ಕಿ ಹೊಡೆದಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ಸದ್ಯ ಅಪಘಾತದಲ್ಲಿ ಗಾಯಗೊಂಡವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಯಾರಿಗೂ ದೊಡ್ಡ ಮಟ್ಟದ ಗಾಯಗಳಾಗಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಾಂಬನ್ ಡಿಸಿ ಮೊಹಮ್ಮದ್ ಅಲಿಯಾಸ್ ಖಾನ್, ಡಿಐಜಿ ಡಿಕೆಆರ್ ಶ್ರೀಧರ್ ಪಾಟೀಲ್, ಎಸ್‌ಎಸ್‌ಪಿ ರಾಂಬನ್ ಕುಬ್ಬಿರ್ ಸಿಂಗ್ ಮತ್ತು ಎಡಿಸಿ ವರುಣ್‌ಜೀತ್ ಸಿಂಗ್ ಚರಕ್ ಆಸ್ಪತ್ರೆಗೆ ಧಾವಿಸಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಚಿಕಿತ್ಸೆ ಬಳಿಕ ಅಮರನಾಥ ಯಾತ್ರೆಗೆ ತೆರಳಲು ಅನುಮತಿಸಲಾಯಿತು ಎಂದು ತಿಳಿದು ಬಂದಿದೆ.
