ಬೆಂಗಳೂರು, ಫೆ.27: ಭಾರತೀಯ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ರಿಂಕು ಸಿಂಗ್‌ಗೆ ದೊಡ್ಡ ಆಘಾತ ಎದುರಾಗಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಆಸರೆಯಾಗಿರುವ ಹೊತ್ತಲ್ಲೇ ಅವರ ತಂದೆ ಖಾನ್‌ಚಂದ್ ಸಿಂಗ್ ಅವರು ನಿಧನರಾಗಿದ್ದಾರೆ.. ನಾಲ್ಕನೇ ಹಂತದ ಕ್ಯಾನ್ಸರ್‌ಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ. ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಾಕಾರಿಯಾಗದೇ ಮೃತಪಟ್ಟಿದ್ದಾರೆ. ಈ ವಾರದ ಆರಂಭದಲ್ಲೇ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು.
ರಿಂಕು ಸಿಂಗ್, ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ತನ್ನ ತಂದೆಯನ್ನ ನೋಡಲು ತೆರಳಿದ್ರು. ಆದರೆ, ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರದ ಕಾರಣ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಆದ್ರೂ ದೇಶ ಸೇವೆಯನ್ನ ಮರಿಯದ ರಿಂಕು ಭಾರತದ ಪರ ಆಡಲು ಪುನಃ ತಂಡಕ್ಕೆ ವಾಪಸ್ ಆಗಿದ್ರು. ಆದ್ರೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅವರ ಬದಲಾಗಿ ಸಂಜು ಸ್ಯಾಮ್ಸನ್‌ರನ್ನ ಕಣಕ್ಕಿಳಿಸಲಾಗಿತ್ತು. ರಿಂಕು ಸಿಂಗ್‌ಗೆ ಪರ್ಯಾಯ ಫೀಲ್ಡರ್ ಆಗಿ ಭಾಗವಹಿಸಲು ಮಾತ್ರ ಅವಕಾಶ ಸಿಕ್ಕಿತ್ತು. ಇದೀಗ ಅವರ ತಂದೆಯನ್ನ ಕಳೆದುಕೊಂಡು ದೊಡ್ಡ ನಷ್ಟ ಅನುಭವಿಸಿದ್ದಾರೆ.
ರಿಂಕು ಅವರ ವೃತ್ತಿಜೀವನದಲ್ಲಿ ಅವರ ತಂದೆ ಬಹುಮುಖ್ಯ ಪಾತ್ರ ವಹಿಸಿದ್ರು. ಬಹಳಷ್ಟು ವರ್ಷಗಳಿಂದ ಮಗನ ಕ್ರಿಕೆಟ್ ಜರ್ನಿಗೆ ದೊಡ್ಡ ಬೆನ್ನೆಲುಬಾಗಿ ನಿಂತಿದ್ರು. ಅಲಿಗಢದಲ್ಲಿ ಎಲ್‌ಪಿಜಿ ಸಿಲಿಂಡರ್ ವಿತರಣಾ ಕೆಲಸ ಮಾಡುತ್ತಾ ಹಣಕಾಸಿನ ಸಮಸ್ಯೆಗಳ ನಡುವೆಯೂ, ರಿಂಕು ಒಬ್ಬ ಶ್ರೇಷ್ಠ ಕ್ರಿಕೆಟಿಗನಾಗಿ ಬೆಳೆಯಲು ಬೇಕಾದ ಎಲ್ಲಾ ಸೌಕರ್ಯಗಳನ್ನು ಅವರು ಒದಗಿಸಿಕೊಟ್ಟಿದ್ರು.
