ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಯುವತಿ ಗಾಯಕಿಯೊಬ್ಬರು ಗೆಲ್ಲುವ ಮೂಲಕ ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿದ್ದಾರೆ. ಕೇವಲ 25 ವಯಸ್ಸಿಗೆ ಶಾಸಕಿಯಾಗಿ ವಿಧಾನಸಭೆಗೆ ಆಯ್ಕೆ ಆಗಿದ್ದು, ರಾಜಕೀಯ ದಿಗ್ಗಜರ ಗಮನ ಸೆಳೆದಿದ್ದಾರೆ. ಹೌದು.. ಇಷ್ಟಕ್ಕೂ ಆ ಯುವ ಶಾಸಕಿ ಬೇರೆ ಯಾರೂ ಅಲ್ಲ. ಮೈಥಿಲಿ ಠಾಕೂರ್.‌ ವಯಸ್ಸು ಕೇವಲ 25.. ಖ್ಯಾತ ಜಾನಪದ ಗಾಯಕಿಯಾಗಿರುವ ಮೈಥಿಲಿ ಆಲಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ರು. ಬಿಜೆಪಿ ಗೆಲುವನ್ನೇ ಕಂಡಿರದ ಅಲಿನಗರ ಕ್ಷೇತ್ರದಲ್ಲಿ ಈಗ ಯುವ ಗಾಯಕಿ ಗೆದ್ದು ಬೀಗಿದ್ದು, ಬಿಜೆಪಿ ಹೈಕಮಾಂಡ್‌ನ್ನೇ ಬೆರಗುಗೊಳಿಸಿದ್ದಾರೆ.

ಇನ್ನು, ಮೈಥಿಲಿ ಠಾಕೂರ್‌, ಉತ್ತರ ಮತ್ತು ಮಧ್ಯ ಭಾರತದಾದ್ಯಂತ ಫೇಮಸ್‌ ಆಗಿದ್ದಾರೆ. ವಿಶೇಷವಾಗಿ ಬಿಹಾರದ ಸುತ್ತಮುತ್ತ, ಠಾಕೂರ್ ಅವರು ತಮ್ಮ ಪ್ರದರ್ಶನಗಳಿಂದಾಗಿ ಜನರನ್ನು ಆಕರ್ಷಿಸಿದ್ದಾರೆ. ಭೋಜ್‌ಪುರಿ, ಹಿಂದಿ ಮತ್ತು ಸೂಫಿ ಹಾಡು ಹಾಡುವುದರಲ್ಲಿ ಖ್ಯಾತಿ. ಸಾಂಪ್ರದಾಯಿಕ ಸೋಹರ್, ಭೋಜ್‌ಪುರಿ ನಿರ್ಗುಣ್ ಗೀತ್, ರಾಮ-ಸೀತಾ ವಿವಾಹ ಗೀತ್, ಭಜನೆಗಳು, ಛಠ್ ಗೀತ್, ಅರೆ-ಶಾಸ್ತ್ರೀಯ ಕಜ್ರಿ, ಹೋರಿ, ಚೈತಿ, ಗಜಲ್ ಮತ್ತು ಸೂಫಿ ಹಾಡು ಹಾಡುವುದರಲ್ಲಿ ಎತ್ತಿದ ಕೈ. ವಿವಿಧ ರಿಯಾಲಿಟಿ ಶೋಗಳಲ್ಲೂ ಮೈಥಿಲಿ ಠಾಕೂರ್‌ ಮಿಂಚಿದ್ರು.

ಇನ್ನು, ಬಿಹಾರ ಎಲೆಕ್ಷನ್‌ಗೂ ಕೆಲವೇ ತಿಂಗಳು ಮೈಥಿಲಿ ಬಿಜೆಪಿ ಸೇರಿದ್ದರು. ಮೈಥಿಲಿ ಠಾಕೂರ್‌ ಖ್ಯಾತಿ ಪರಿಗಣಿಸಿ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನೀಡಿ ಅಲಿನಗರ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಅಲಿನಗರ ಕ್ಷೇತ್ರ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ್ದು, ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಿರುವುದು ಗಮನಾರ್ಹ. ಆರ್‌ಜೆಡಿಯ ಪ್ರಭಾವಿ ನಾಯಕ ಬಿನೋದ್ ಮಿಶ್ರ ಅವರನ್ನು 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಅಲ್ಲದೇ ಮೊಟ್ಟ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಕಮಲ ಅರಳಿಸಿದ ಅತಿ ಕಿರಿಯ ಶಾಸಕಿ ಎಂಬ ಕೀರ್ತಿಗೆ ಮೈಥಿಲಿ ಪಾತ್ರರಾಗಿದ್ದಾರೆ.

ಮತ್ತೊಂದೆಡೆ, ಮೈಥಿಲಿ ಠಾಕೂರ್‌ ಪ್ರಚಾರದ ಸಮಯದಲ್ಲಿ ನೀಡಿದ್ದ ಹೇಳಿಕೆ ಈಗ ಭಾರಿ ಚರ್ಚೆಯಾಗುತ್ತಿದೆ. ತಮ್ಮ ಪ್ರಚಾರದ ಸಮಯದಲ್ಲಿ, ಅಲಿನಗರದ ಮತದಾರರಿಗೆ ತಾವು ಚುನಾಯಿತರಾದರೆ ಕ್ಷೇತ್ರವನ್ನು ಸೀತಾನಗರ ಅಂತಾ ಮರುನಾಮಕರಣ ಮಾಡುವುದಾಗಿ ಹೇಳಿ ವಿವಾದದ ಕೇಂದ್ರಬಿಂದುವಾಗಿದ್ದರು. ನಾನು ಈ ಸ್ಥಾನದಿಂದ ಗೆದ್ದರೆ ಅಲಿನಗರವು ಸೀತಾನಗರವಾಗಲಿದೆ ಅಂತಾ ಹೇಳಿ ಹೊಸ ಸಂಚಲನ ಸೃಷ್ಟಿಸಿದ್ದರು.

Share.
Leave A Reply