ಬೆಂಗಳೂರು, ಜೂ.17: ಇದೇ ಜುಲೈ 03ರಂದು ಕೃತ್ವಿಕ್ ನಿರ್ದೇಶನದ ಲವ್ ಸೀಸನ್ಸ್ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ. ಬಿಡುಗಡೆಗಾಗಿ ತಯಾರಾಗುತ್ತಿರುವ ಚಿತ್ರತಂಡವೀಗ ಬಿಡುಗಡೆಗೊಂಡಿರುವ ಮೂರು ಹಾಡುಗಳಿಗೆ ಕೇಳುಗರ ಕಡೆಯಿಂದ ಸಿಗುತ್ತಿರೋ ಭರಪೂರ ಪ್ರತಿಕ್ರಿಯೆ ಕಂಡು ಖುಷಿಗೊಂಡಿದೆ. ಈ ಸಂಬಂಧವಾಗಿ ಪತ್ರಿಕಾಗೋಷ್ಠಿಯ ಮೂಲಕ ಹಾಡುಗಳ ಗೆಲುವಿನ ಸಿಹಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಸಂಗೀತ ನಿರ್ದೇಶಕರು, ಗಾಯಕ, ಗಾಯಕಿಯರು ಹಾಗೂ ಸಾಹಿತ್ಯ ಬರೆದವರ ಮೂಲಕವೇ ಈ ಗೆಲುವನ್ನು ಚಿತ್ರತಂಡ ಸಂಭ್ರಮಿಸಿದೆ.
ಈ ಪ್ರತಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಎನ್.ಆರ್ ಮಂಜುನಾಥ್ (ನೀಲೇರಿ), ನಿರ್ದೇಶಕ ಕೃತ್ವಿಕ್, ಹಿರಿಯ ಗೀತಸಾಹಿತಿ ಕೆ.ಕಲ್ಯಾಣ್, ಸಂಗೀತ ನಿರ್ದೇಶಕ ವೀರ್ ಸಮರ್ಥ್, ಗೀತ ರಚನೆಕಾರರಾದ ಪ್ರಮೋದ್ ಮರವಂತೆ, ಸಾಯಿ ಸರ್ವೇಶ್, ನಾಯಕ ಮುಕುಂದ ರಾಮಸ್ವಾಮಿ, ನಾಯಕಿಯರು ಶ್ವೇತಾ ಕೊಗ್ಲೂರ್, ದಿಯಾ ಕೀರ್ತಿ, ಗಾಯಕಿ ಪ್ರಜ್ಞಾ ಮರಾಠೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ. ಕಲ್ಯಾಣ್ ಹಾಡುಗಳು ಯಾವತ್ತಿಗೂ ಚಿತ್ರವೊಂದರ ಆಮಂತ್ರಣವಾಗಿರುತ್ತೆ. ಹಿಂದೆಲ್ಲ ಆಡಿಯೋ ರಿಲೀಸ್ ಮಾಡುವ ಮೂಲಕವೇ ಚಿತ್ರವೊಂದನ್ನು ಪ್ರೇಕ್ಷಕರಿಗೆ ತಲುಪಿಸಲಾಗುತ್ತಿತ್ತು. ಆದರೆ, ಇಂದು ಟ್ರೆಂಡ್ ಬದಲಾಗಿದೆ. ಅದೆಲ್ಲದರ ನಡುವೆಯೂ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರು ನೆನಪಲ್ಲುಳಿಯುವಂಥಾ ಹಾಡುಗಳನ್ನು ಕೊಟ್ಟಿದ್ದಾರೆ. ಆರಂಭಿಕವಾಗಿ ವೀರ್ ಸಮರ್ಥ್ ಬಿಟ್ಟರೆ ಮತ್ಯಾರ ಮುಖ ಪರಿಚಯವಿರದಿದ್ದರೂ ಎಲ್ಲರೂ ಒಟ್ಟಾಗಿ ಹಾಡು ಸೃಷ್ಟಿಸಿದ ತುಂಬು ಖುಷಿ ನನಗಿದೆ ಅನ್ನುತ್ತಲೇ ಈ ಪ್ರತಿಭಾನ್ವಿತ ತಂಡಕ್ಕೆ ಗೆಲುವಾಗಲೆಂದು ಹಾರೈಸಿದರು.

ಪ್ರಮೋದ್ ಮರವಂತೆ ಸೇರಿದಂತೆ ಉಪಸ್ಥಿತರಿದ್ದವರು “ಲವ್ ಸೀಸನ್ಸ್” ಹಾಡುಗಳ ಗೆಲುವಿನ ಭಾಗವಾಗಿದ್ದರ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್ ನಿರ್ದೇಶನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ.
ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಜೊತೆಯಾಗಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರೀತು ಸಿಂಗ್ ಮುಂತಾದವರ ತಾರಾಗಣದೊಂದಿಗೆ “ಲವ್ ಸೀಸನ್ಸ್” ಕಳೆಗಟ್ಟಿಕೊಂಡಿದೆ.
