ಬೆಳಗಾವಿ: ಚಳಿಗಾಲದ ಅಧಿವೇಶನ ನಡೆಯುತ್ತಿರುವ ಮಧ್ಯೆಯೂ ಆಡಳಿತ ಪಕ್ಷದಲ್ಲಿ ಕುರ್ಚಿ ಗುದ್ದಾಟ ಮಾತ್ರ ಒಳಒಳಗೆ ಬಹಿರಂಗವಾಗಿಯೇ ನಡೆಯುತ್ತಿದೆ. ಈಗ ಡಿಕೆಶಿಗೆ ಅಧಿವೇಶನ ಮುಗಿಯುತ್ತಿದ್ದಂತೆ ಬಂಪರ್ ಗಿಫ್ಟ್ ಸಿಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿಯೇ ನಾಯಕರು ಬೆಂಬಲಿಗರ ಸಂಖ್ಯಾಬಲ ತೋರಿಸುವ ಕಾರ್ಯ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಬುಧವಾರ ರಾತ್ರಿ ಸಿಎಂ ಸಿದ್ದರಾಮಯ್ಯ (CM Siddaramaiah) ಅಹಿಂದ ನಾಯಕರ ಜೊತೆ ಸಭೆ ನಡೆಸಿದ್ದರು. ಬುಧವಾರ ರಾತ್ರಿ ಮಾಜಿ ಶಾಸಕ ಫಿರೋಜ್ ಸೇಠ್ ನಿವಾಸದಲ್ಲಿ ನಡೆದ ಭೋಜನಕೂಟದಲ್ಲಿ ಸಿಎಂ ಭಾಗವಹಿಸಿದ್ದರು. ಇದರ ಬೆನ್ನಲ್ಲೇ ಗುರುವಾರ ರಾತ್ರಿ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಆಪ್ತರ ಸಭೆ ನಡೆಸಿದ್ದಾರೆ. ಆಪ್ತ ಗಣಿ ಉದ್ಯಮಿ ದೊಡ್ಡಣ್ಣವರ್ ಅವರ ಫಾರ್ಮ್ ಹೌಸ್‌ನಲ್ಲಿ ಆಪ್ತ ಸಚಿವರು, ಶಾಸಕರ ಜೊತೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಸಭೆ ನಡೆಸಿದ್ದಾರೆ.
ಈ ಪಾರ್ಟಿಯನ್ನು ಡಿಕೆಶಿ ಸಹೋದರ ಡಿಕೆ ಸುರೇಶ್ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ. ಸಭೆಯಲ್ಲಿ 5ಕ್ಕೂ ಹೆಚ್ಚು ಸಚಿವರು, 40ಕ್ಕೂ ಅಧಿಕ ಶಾಸಕರು ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ, ಸಿಎಂ ಆಪ್ತ ವಲಯದ ಯಾವೊಬ್ಬ ಶಾಸಕ, ಸಚಿವರು ಭಾಗಿಯಾಗಿರಲಿಲ್ಲ ಎನ್ನಲಾಗಿದೆ.
ಎಂ.ಸಿ ಸುಧಾಕರ್, ಮಂಕಾಳ ವೈದ್ಯ, ಕೆ.ಎಚ್. ಮುನಿಯಪ್ಪ, ಶರಣಪ್ರಕಾಶ್ ಪಾಟೀಲ್, ಡಿ.ಕೆ.ಸುರೇಶ್, ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ, ಶಾಸಕ ಬಾಬಾಸಾಹೇಬ್ ಪಾಟೀಲ್, ಶಿವರಾಂ ಹೆಬ್ಬಾರ್, ಸಿ.ಪಿ ಯೋಗೇಶ್ವರ್, ಶ್ರೀನಿವಾಸ್ ಮಾನೆ, ಎನ್‌ಎ ಹ್ಯಾರೀಸ್, ಇಕ್ಬಾಲ್ ಹುಸೇನ್, ಗಣೇಶ್ ಹುಕ್ಕೇರಿ, ಎಸ್ ಟಿ ಸೋಮಶೇಖರ್ ಸೇರಿದಂತೆ 40ಕ್ಕೂ ಅಧಿಕ ನಾಯಕರು ಭಾಗಿಯಾಗಿದ್ದರು.
ಈಗ ಡಿಕೆಶಿ ಬೆಂಬಲಿತ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಬಿಜೆಪಿ ಉಚ್ಛಾಟಿತ ಶಾಸಕ ಎಸ್.ಟಿ. ಸೋಮಶೇಖರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡಿರುವ ಇಕ್ಬಾಲ್ ಹುಸೇನ್, ಸಂಕ್ರಾಂತಿ ಅಲ್ಲ, ಅಧಿವೇಶನ ಮುಗಿದ ಕೂಡಲೇ ಡಿಕೆಶಿ ಸಿಎಂ ಆಗುತ್ತಾರೆ ಎಂದಿದ್ದಾರೆ. ನನ್ನ ಹಣೆಯಲ್ಲಿ ಬರೆದಿದ್ದಕ್ಕೆ ನಾನು ಶಾಸಕನಾಗಿದ್ದೇನೆ. ಹಾಗೆಯೇ ಡಿಕೆ ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದೆ ಅವರು ಸಿಎಂ ಆಗುತ್ತಾರೆ. ನಿನ್ನೆ 55 ಜನ ಸೇರಿದ್ದೇವು. ಎಲ್ಲರೂ ಊಟ ಮಾಡಿದೇವು.
ಯಾರಿಗೆ ಯಾವಾಗ ಜ್ಞಾನೋದಯ ಆಗುತ್ತೋ ಗೊತ್ತಿಲ್ಲ. ಡಿಕೆಶಿ ಮಾತ್ರ ಸಿಎಂ ಆಗುತ್ತಾರೆ. ಫಲಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದಿದ್ದಾರೆ.
ಇನ್ನು ಬಿಜೆಪಿ ಉಚ್ಛಾಟಿತ ಶಾಸಕ ಎಸ್.ಟಿ. ಸೋಮಶೇಖರ್ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರ ಆಪ್ತರೊಂದಿಗೆ ನಡೆದ ಭೋಜನಕೂಟದಲ್ಲಿ ರಾಜಕೀಯ ಚರ್ಚೆ ನಡೆದಿಲ್ಲ, ಊಟ ಚೆನ್ನಾಗಿತ್ತು. ಅಲ್ಲಿ ಮಟನ್, ಚಿಕನ್, ಬಿರಿಯಾನಿ ಬಗ್ಗೆ ಮಾತ್ರ ಚರ್ಚೆ ನಡೆಯಿತು ಎಂದಿದ್ದಾರೆ. ನಂಬರ್ ಗೇಮ್ ನಡೆಯುತ್ತಿದೆ ಎಂಬ ಊಹಾಪೋಹ ತಳ್ಳಿಹಾಕಿದ ಅವರು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ. ಆದರೆ, ಯಡಿಯೂರಪ್ಪ ಅವರ ಬದಲಾವಣೆಯನ್ನು ಉದಾಹರಣೆಯಾಗಿ ನೀಡಿದ್ದಾರೆ. ಹೀಗಾಗಿ ಸಿಎಂ ಬದಲಾವಣೆಯ ಚರ್ಚೆ ನಡೆದಿರುವುದು ನಿಜ ಎಂದು ಊಹಿಸಲಾಗುತ್ತಿದೆ.
