ಬೆಂಗಳೂರು, ಫೆ.05: ಬಿಎಂಆರ್‌ಸಿಎಲ್ ಪುನಃ ʼನಮ್ಮ ಮೆಟ್ರೋʼ ಪ್ರಯಾಣಿಕರಿಗೆ ದರ ಏರಿಕೆಯ ಬರೆ ಎಳೆದಿದೆ. ಇದೇ ಫೆ.09 ರಿಂದ ಜಾರಿಗೆ ಬರುವಂತೆ ಮೆಟ್ರೋ ಟಿಕೆಟ್ ದರವನ್ನು ಶೇ. 5ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ಈ ದರ ಏರಿಕೆಯು ದಿನನಿತ್ಯ ಮೆಟ್ರೋ ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರ ಜೇಬಿಗೆ ನೇರ ಹೊಡೆತ ನೀಡಲಿದೆ.
ಮೆಟ್ರೋ ರೈಲ್ವೇ ಕಾಯ್ದೆ 2002ರ ಅಡಿಯಲ್ಲಿ ರಚಿಸಲಾದ ಫೇರ್ ಫಿಕ್ಸೇಷನ್ ಕಮಿಟಿ(ಎಫ್‌ಎಫ್‌ಸಿ) ಶಿಫಾರಸ್ಸಿನಂತೆ ಈ ದರ ಪರಿಷ್ಕರಣೆ ಮಾಡಲಾಗಿದೆ. ಮೆಟ್ರೋ ಸಂಚಾರದ ನಿರ್ವಹಣೆ, ವಿದ್ಯುತ್ ವೆಚ್ಚ, ಸಿಬ್ಬಂದಿ ವೇತನ, ತಾಂತ್ರಿಕ ನಿರ್ವಹಣೆ ಸೇರಿದಂತೆ ಕಾರ್ಯಾಚರಣಾ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅವನ್ನು ಸರಿದೂಗಿಸಲು ದರ ಏರಿಕೆ ಅನಿವಾರ್ಯ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಕಳೆದ 7.5 ವರ್ಷಗಳ ಬಳಿಕ ಮೊದಲ ಬಾರಿಗೆ ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಏಕಾಏಕಿ ಭಾರೀ ದರ ಏರಿಕೆ ತಪ್ಪಿಸುವ ಉದ್ದೇಶದಿಂದ ಪ್ರತಿವರ್ಷ ‘ಸ್ವಯಂಚಾಲಿತ ದರ ಪರಿಷ್ಕರಣೆ ವ್ಯವಸ್ಥೆ’ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಇನ್ನು, ದರ ಏರಿಕೆ ಕ್ರಮಕ್ಕೆ ಸಾರ್ವಜನಿಕರು ಹಾಗೂ ರಾಜಕೀಯ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮೆಟ್ರೋ ಟಿಕೆಟ್ ದರವನ್ನು ಶೇ.101ರಷ್ಟು ಹೆಚ್ಚಳ ಮಾಡಲಾಗಿತ್ತು. ಆದರೆ, ಸಾರ್ವಜನಿಕರಿಂದ ವ್ಯಾಪಕ ವಿರೋಧ, ಪ್ರತಿಭಟನೆಗಳು ಉಂಟಾದ ಹಿನ್ನೆಲೆಯಲ್ಲಿ ಆ ನಿರ್ಧಾರವನ್ನು ಬಿಎಂಆರ್‌ಸಿಎಲ್ ಹಿಂಪಡೆಯಬೇಕಾಯಿತು. ಈ ಬಾರಿ ಕೇವಲ ಶೇ.5ರಷ್ಟು ಏರಿಕೆ ಎಂದು ಹೇಳಲಾಗುತ್ತಿದ್ದರೂ ಸಹ ದಿನನಿತ್ಯ ಮೆಟ್ರೋ ಅವಲಂಬಿಸಿರುವ ಮಧ್ಯಮ ವರ್ಗ ಹಾಗೂ ಉದ್ಯೋಗಸ್ಥರಿಗೆ ಇದು ಹೆಚ್ಚುವರಿ ಹೊರೆ ಎನ್ನುವುದು ಮೆಟ್ರೋ ಪ್ರಯಾಣಿಕರ ಅಭಿಪ್ರಾಯವಾಗಿದೆ.
