ಬೆಂಗಳೂರು: ಸಚಿವ ಕೆ.ಜೆ. ಜಾರ್ಜ್ ವಿರುದ್ಧ ದಾಖಲಾಗಿದ್ದ ದೂರುಗಳನ್ನು ಹೈಕೋರ್ಟ್ (High Court) ರದ್ದು ಮಾಡಿದೆ. ಹೀಗಾಗಿ ಜಾರ್ಜ್ ನಿಟ್ಟುಸಿರು ಬಿಡುವಂತಾಗಿದೆ.
ಸ್ಮಾರ್ಟ್ ಮೀಟರ್ ಟೆಂಡರ್ ಹಗರಣ (Smart Meter Tender Scam) ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ (KJ George) ಸೇರಿದಂತೆ ಹಲವರ ವಿರುದ್ಧ ಖಾಸಗಿ ದೂರುಗಳು ದಾಖಲಾಗಿದ್ದವು. ಸಚಿವ ಕೆ.ಜೆ. ಜಾರ್ಜ್ ಅವರೊಂದಿಗೆ ಇಂಧನ ಇಲಾಖೆಯ ಗೌರವ್ ಗುಪ್ತ, ಬೆಸ್ಕಾಂನ ಮಹಾಂತೇಶ ಬೀಳಗಿ,ಎಚ್.ಜೆ. ರಮೇಶ್ ವಿರುದ್ಧ ಪ್ರಕರಣಗಳನ್ನೂ ರದ್ದು ಪಡಿಸಿ ಆದೇಶ ಹೊರಡಿಸಲಾಗಿದೆ.
ಈ ದೂರನ್ನು ಬಿಜೆಪಿ ನಾಯಕರು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಹೈಕೋರ್ಟ್ ಪೀಠವು ಸಚಿವ ಕೆ.ಜೆ.ಜಾರ್ಜ್ ವಿರುದ್ಧದ ಖಾಸಗಿ ದೂರು ರದ್ದು ಪಡಿಸಿ ಆದೇಶ ಹೊರಡಿಸಿದೆ.
ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಇಂಧನ ಇಲಾಖೆ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿತ್ತು. ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್ ಗೆ ಗುತ್ತಿಗೆ ನೀಡಿ ಗೋಲ್ಮಾಲ್ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಬೇರೆ ರಾಜ್ಯಗಳಲ್ಲಿ 900 ರೂ.ಗೆ ಸಿಗುವ ಸ್ಮಾರ್ಟ್ ಮೀಟರ್ ನ್ನು 5 ಸಾವಿರ ರೂ. ನಿಂದ 10 ಸಾವಿರ ರೂ.ಗೆ ನೀಡಲಾಗುತ್ತಿದೆ. ಇದರಿಂದ ದೊಡ್ಡ ಹಗರಣ ನಡೆದಿದೆ ಎಂದು ಆರೋಪಿಸಲಾಗಿತ್ತು. ಆದರೆ, ಕೋರ್ಟ್ ನಿಂದಾಗಿ ಈಗ ಜಾರ್ಜ್ ಗೆ ಚಾರ್ಜ್ ಸಿಕ್ಕಂತಾಗಿದೆ.
