ಬೆಂಗಳೂರು, ಫೆ.12: ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮತ್ತು ರೋಡ್ ರೇಜ್ ಪ್ರಕರಣಗಳು ಮಿತಿಮೀರುತ್ತಿವೆ ಎಂಬುದಕ್ಕೆ ಮತ್ತೊಂದು ಆಘಾತಕಾರಿ ಸಾಕ್ಷಿ ಸಿಕ್ಕಿದೆ. ಜನನಿಬಿಡವಾದ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ವ್ಯಕ್ತಿಯೊಬ್ಬರನ್ನು ಎಳೆದೊಯ್ಯಲಾಗಿದೆ. ಈ ದೃಶ್ಯವನ್ನು ಕಂಡ ಸಾರ್ವಜನಿಕರು ಮತ್ತು ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ.

ರಸ್ತೆ ತುಂಬೆಲ್ಲಾ ವಾಹನಗಳಿದ್ದರೂ, ಅದ್ಯಾವುದನ್ನೂ ಲೆಕ್ಕಿಸದೆ ಕೆಂಪು ಬಣ್ಣದ ಮಾರುತಿ ಸುಜುಕಿ XL6 ಕಾರಿನ ಚಾಲಕ ಅತಿರೇಕದ ವರ್ತನೆ ತೋರಿದ್ದಾನೆ. ಕಾರಿನ ಬಾನೆಟ್ ಮೇಲೆ ವ್ಯಕ್ತಿಯೊಬ್ಬರು ಮಲಗಿದ್ದು, ವಾಹನ ನಿಲ್ಲಿಸುವಂತೆ ಜೋರಾಗಿ ಕೂಗಿಕೊಳ್ಳುತ್ತಿದ್ದಾರೆ. ʼನಿಲ್ಲಿಸು, ನಿಲ್ಲಿಸುʼ ಎಂದು ಎಷ್ಟೇ ಅಂಗಲಾಚಿದರೂ, ಚಾಲಕ ಮಾತ್ರ ಕಾರನ್ನು ನಿಲ್ಲಿಸದೆ ವೇಗವಾಗಿ ಮುನ್ನುಗ್ಗಿದ್ದಾನೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬರುವಂತೆ, ಕಾರು ವೇಗವಾಗಿ ಚಲಿಸುತ್ತಿದ್ದಾಗ ಪಕ್ಕದಲ್ಲೇ ಲಾರಿಗಳು ಮತ್ತು ಆಟೋಗಳು ಸಂಚರಿಸುತ್ತಿದ್ದವು. ಬಾನೆಟ್ ಮೇಲೆ ಇದ್ದ ವ್ಯಕ್ತಿ ಭಯಭೀತರಾಗಿ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಸ್ವಲ್ಪ ಯಾಮಾರಿದ್ದರೂ ಅವರು ರಸ್ತೆಗೆ ಬಿದ್ದು, ಹಿಂದಿನಿಂದ ಬರುತ್ತಿದ್ದ ವಾಹನಗಳ ಚಕ್ರಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿತ್ತು. ಇದನ್ನು ಕಂಡ ಇತರೆ ವಾಹನ ಸವಾರರು ಕೂಡ ಆತಂಕಗೊಂಡಿದ್ದರು.

ಘಟನೆ ಕುರಿತ ಮಾಹಿತಿ:
ಬೆಂಗಳೂರು ಸಂಚಾರ ಪೊಲೀಸರ ಮಾಹಿತಿ ಪ್ರಕಾರ, ಈ ಘಟನೆಗೆ ಮೂಲ ಕಾರಣ ಚಿಕ್ಕ ಅಪಘಾತ. ಆರೋಪಿ ಚಾಲಕ ತನ್ನ ಕಾರನ್ನು ಚಾಲನೆ ಮಾಡುವಾಗ ಆಟೋ ರಿಕ್ಷಾವೊಂದಕ್ಕೆ ತಗುಲಿಸಿದ್ದಾನೆ. ಇದನ್ನು ಪ್ರಶ್ನಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ, ವ್ಯಕ್ತಿ ಕಾರಿನ ಮುಂಭಾಗ ನಿಂತಿದ್ದಾರೆ. ಆದರೂ ಚಾಲಕ ಕಾರನ್ನು ಚಲಾಯಿಸಿಕೊಂಡು ಹೋಗಿದ್ದು, ವ್ಯಕ್ತಿ ಬಾನೆಟ್ ಮೇಲೆ ಬೀಳುವಂತಾಗಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೂರ್ವ ವಿಭಾಗದ ಡಿಸಿಪಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು, ಕೃತ್ಯಕ್ಕೆ ಬಳಸಿದ ಕಾರನ್ನು ಜಪ್ತಿ ಮಾಡಲಾಗಿದೆ. ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.

Share.
Leave A Reply