ಡಿ.01 : ತೆಲುಗು ನಟ ನಾಗಚೈತನ್ಯರಿಂದ ಡಿವೋರ್ಸ್ ಪಡೆದ ನಂತರ ಏಕಾಂಗಿಯಾಗಿದ್ದ ನಟಿ ಸಮಂತಾ ಈಗ ಮತ್ತೊಂದು ವೈವಾಹಿಕ ಜೀವನ ಆರಂಭಿಸಿದ್ದಾರೆ. ಬಾಲಿವುಡ್ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಸಪ್ತಪದಿ ತುಳಿದಿದ್ದು, ಫೋಟೋಸ್, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸೋಮವಾರ ಬೆಳ್ಳಂಬೆಳಗ್ಗೆ ಗೆಳೆಯ ರಾಜ್ ನಿಡಿಮೋರು ಜೊತೆ ಸಮಂತಾ ಹೊಸ ಬಾಳಿಗೆ ಕಾಲಿಟ್ಟಿದ್ದು, ತಮಿಳುನಾಡಿನ ಕೊಯಮತ್ತೂರಿನ ಈಶ ಫೌಂಡೇಶನ್ ಆವರಣದಲ್ಲಿರುವ ಲಿಂಗಭೈರವಿ ದೇವಿಯ ಮುಂದೆ ಸರಳವಾಗಿ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ.

ರಾಜ್ ನಿಡಿಮೋರು ಈಗಾಗ್ಲೇ ವಿವಾಹವಾಗಿದ್ದು ಸಮಂತಾ ಜೊತೆ ಅವರಿಗೆ ಇದು ಎರಡನೇ ವಿವಾಹವಾಗಿದೆ. ಇನ್ನು ಸಮಂತಾ ಈ ಹಿಂದೆ ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು. ನಂತರ 2021ರಲ್ಲಿ ವಿಚ್ಛೇದನ ಪಡೆದಿದ್ದರು. ವೆಬ್‌ಸಿರೀಸ್ ಒಡನಾಡಿ ರಾಜ್ ಜೊತೆ ಸಮಂತಾ ಪ್ರೀತಿಯಲ್ಲಿ ಬಿದ್ದಿದ್ದು ಸದ್ದಿಲ್ಲದೇ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗುತ್ತಿದೆ. ಲಿಂಗಭೈರವಿ ದೇವಿಯ ಆರಾಧಕಿ ಆಗಿರುವ ಸಮಂತಾ, ಮನೆಯಲ್ಲಿ ನಿತ್ಯವೂ ಪೂಜೆ ಮಾಡೋದಾಗಿ ಹೇಳಿಕೊಂಡಿದ್ರು. ದೇವಿ ಮುಂದೆ ಧ್ಯಾನ ಮಾಡುವ ಫೋಟೋಗಳನ್ನೂ ಸಹ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಅದೇ ದೇವಿಯ ಮುಂದೆ ರಾಜ್ ಸಮಂತಾ ಅಧಿಕೃತವಾಗಿ ದಾಂಪತ್ಯಕ್ಕೆ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಸರಳ ವಿವಾಹಕ್ಕೆ ಯಾರೆಲ್ಲಾ ಭಾಗಿಯಾಗಿದ್ರು, ಗುಟ್ಟಾಗಿ ವಿವಾಹ ಆಗಿದ್ಯಾಕೆ? ಎನ್ನುವ ಬಗ್ಗೆ ಸ್ವತಃ ಸಮಂತಾ ಹಾಗೂ ರಾಜ್ ಅವರೇ ಬಹಿರಂಗಪಡಿಸಬೇಕಾಗಿದೆ.

ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, ಹಾರ್ಟ್ ಎಮೋಜಿ ಜೊತೆಗೆ 01.12.2025 ಎಂದು ಬರೆದುಕೊಂಡಿದ್ದಾರೆ. ಸಮಂತಾ ಪೋಸ್ಟ್‌ಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸೇರಿ ಹಲವರು ಶುಭಾಶಯವನ್ನು ತಿಳಿಸಿದ್ದಾರೆ.
