ಬೆಂಗಳೂರಿನಲ್ಲಿ (Bengaluru) ಸ್ವಂತ ಬೈಕ್ ಇಲ್ಲಾಂದ್ರೂ ಬೈಕ್‌ನಲ್ಲಿ ಓಡಾಡಬಹುದಿತ್ತು.. ಆಪ್‌ನಲ್ಲಿ ಬುಕ್ ಮಾಡ್ತಿದ್ದಂತೆ ಬೈಕ್ ಬಂದು ನಾವು ಹೇಳಿದಲ್ಲಿಗೆ ಡ್ರಾಪ್ ಮಾಡ್ತಿತ್ತು.. ಆದ್ರೀಗ ಬೈಕ್ ಟ್ಯಾಕ್ಸಿಗಳ (Bike Taxi) ಓಡಾಟಕ್ಕೆ ಬ್ರೇಕ್ ಬಿದ್ದಿದೆ. ಬೈಕ್ ಟ್ಯಾಕ್ಸಿ ನಿಷೇಧಿಸಿ ಹೈಕೋರ್ಟ್ (High Court ) ಆದೇಶ ಹೊರಡಿಸಿದೆ.. ಇದನ್ನೇ ಬಂಡವಾಳ ಮಾಡಿಕೊಂಡಿರುವ ಆಟೋ ಕ್ಯಾಬ್‌ಗಳ ಚಾಲಕರು, ಪ್ರಯಾಣಿಕರ ಸುಲಿಗೆ ಮಾಡ್ತಿದ್ದಾರೆ…

ಬೈಕ್ ಟ್ಯಾಕ್ಸಿ ಬ್ಯಾನ್ ಬೆನ್ನಲ್ಲೇ ಆಟೋ ದರ ಏರಿಕೆ?
ಬೈಕ್ ಟ್ಯಾಕ್ಸಿ ನಿಷೇಧ ಮಾಡಿದ್ರಿಂದ ಬೆಂಗಳೂರಿನ ಜನರು ಈಗ ಆಟೋ, ಓಲಾ(ola), ಉಬರ್‌ಗೆ (uber) ಹೆಚ್ಚು ಮೊರೆ ಹೋಗ್ತಿದ್ದಾರೆ.. ಇದರ ಲಾಭ ಪಡೆಯಲು ಮುಂದಾಗಿರುವ ಆಟೋ ಟ್ಯಾಕ್ಸಿ ಚಾಲಕರು, ದುಪ್ಪಟ್ಟು ದರ ಪೀಕುತ್ತಿದ್ದಾರೆ.. ಬೈಕ್ ಟ್ಯಾಕ್ಸಿ ನಿಷೇಧದ ಬೆನ್ನಲ್ಲೇ ಆಟೋ ಪ್ರಯಾಣದ ದರ ಏರಿಕೆ ಕಂಡುಬಂದಿದೆ. ಓಲಾ ಸೇರಿದಂತೆ ಕೆಲ ಅಗ್ರಿಗೇಟರ್ ಕಂಪನಿಗಳು ಬೇಕಾಬಿಟ್ಟಿ ವಸೂಲಿ ಮಾಡ್ತಿರುವ ಆರೋಪ ಕೇಳಿ ಬಂದಿದೆ.. ಅದು ಹೇಗೆ ಅಂದರೆ, ಟೌನ್ ಹಾಲ್‌ನಿಂದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕಿರುವ ಅಂತರ 2.02ಕಿಲೋ ಮೀಟರ್, ನಿಯಮದ ಪ್ರಕಾರ 30ರಿಂದ 35 ರೂಪಾಯಿ ತಗೋಬೇಕು. ಆದ್ರೆ, ಓಲಾದಲ್ಲಿ 98 ರೂಪಾಯಿ ಚಾರ್ಜ್ ಆಗುತ್ತಿದೆ.. ಇದೇ ರೀತಿ ಹಲವೆಡೆ ಬೇಕಾಬಿಟ್ಟಿ ವಸೂಲಿ ಮಾಡ್ತಿರೋದಾಗಿ ಆರೋಪ ಕೇಳಿಬಂದಿದೆ..

ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಕಾರಣವೇನು..?
ಬೆಂಗಳೂರಲ್ಲಿ 2021ರಿಂದ ಬೈಕ್ ಟ್ಯಾಕ್ಸಿ ಸೇವೆ ಜಾರಿಯಲ್ಲಿತ್ತು. ಇದು ಆಟೋ ಚಾಲಕರು ಮತ್ತು ಕ್ಯಾಬ್ ಚಾಲಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲಲ್ಲಿ ಬೈಕ್ ಟ್ಯಾಕ್ಸಿ ಸವಾರರ ಮೇಲೆ ಹಲ್ಲೆ ಸಹ ನಡೆದಿತ್ತು. ಬೆನ್ನಲ್ಲೇ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿಂದೆ ವಿಚಾರಣೆ ನಡೆಸಿದ್ದ ಹೈಕೋರ್ಟ್ನ ಏಕಸದಸ್ಯ ಪೀಠ, ಏಪ್ರಿಲ್ 2ರಂದು ಎಲ್ಲಾ ಬೈಕ್ ಟ್ಯಾಕ್ಸಿ ಸೇವೆಗಳನ್ನು 6 ವಾರಗಳ ಒಳಗೆ ನಿಲ್ಲಿಸುವಂತೆ ಆದೇಶಿಸಿತ್ತು. ನ್ಯಾಯಾಲಯ ನೀಡಿದ್ದ 6 ವಾರಗಳ ಗಡುವು ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಅದಾಗ್ಯೂ, ರಾಪಿಡೋ(rapido), ಓಲಾ ಮತ್ತು ಉಬರ್ ಸೇರಿದಂತೆ ಬೈಕ್ ಟ್ಯಾಕ್ಸಿ ನಿರ್ವಾಹಕರು ಆದೇಶ ವಿಸ್ತರಣೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ರು. ಈ ವಿನಂತಿಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ಅಂತಿಮವಾಗಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಲು ಗಡುವನ್ನು ಜೂನ್ 15ರವರೆಗೆ ವಿಸ್ತರಿಸಿದ್ರು. ಆದರೆ ಬೈಕ್ ಟ್ಯಾಕ್ಸಿಗಳಿಗೆ ಹೊಸ ನಿಯಮಗಳನ್ನು ರೂಪಿಸದ ಕಾರಣ ಮತ್ತೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಅಂತಾ ಕೋರ್ಟ್ ಹೇಳಿದೆ. ಮುಂದಿನ ವಿಚಾರಣೆಯನ್ನು ಜೂನ್ 24ಕ್ಕೆ ನಿಗದಿಪಡಿಸಲಾಗಿದೆ. ಸದ್ಯ ಬೈಕ್ ಟ್ಯಾಕ್ಸಿ ನಿಷೇಧ ಮಾಡಿರೋದ್ರಿಂದ ಆಟೋ ಟ್ಯಾಕ್ಸಿ ಚಾಲಕರ ಹಾವಳಿ ಹೆಚ್ಚಾಗಿದೆ.. ಪ್ರಯಾಣಿಕರ ಸಂಕಷ್ಟದ ಸ್ಥಿತಿಯನ್ನೇ ಬಳಸಿಕೊಂಡು ಲಾಭ ಪಡೆಯಲು ಮುಂದಾಗಿದ್ದಾರೆ.

