ಕೆ.ಆರ್.ನಗರದಲ್ಲಿ ಕೆಲಸದಾಕೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಕೋರ್ಟ್ನಲ್ಲಿ ನಡೆದ ವಿಚಾರಣೆಗೆ ಪ್ರಜ್ವಲ್ ರೇವಣ್ಣ ಹಾಜರಾಗಿದ್ದರು. ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣದ ತೀರ್ಪು ಆಗಸ್ಟ್ 1ಕ್ಕೆ ಪ್ರಕಟವಾಗಲಿದೆ. ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ನ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ತೀರ್ಪು ಪ್ರಕಟಿಸಲಿದ್ದಾರೆ.
ತಾಂತ್ರಿಕ ಸಾಕ್ಷ್ಯ ಕೇಳಿದ ಕೋರ್ಟ್
ಇವತ್ತಿನ ವಿಚಾರಣೆಯಲ್ಲಿ ಕೋರ್ಟ್ ಎರಡೂ ಕಡೆ ವಕೀಲರಿಂದ ಕೆಲವು ಸ್ಪಷ್ಟನೆಗಳನ್ನು ಕೇಳಿತು. ಮೊಬೈಲ್ ಸಾಕ್ಷ್ಯ, ತಾಂತ್ರಿಕ ಸಾಕ್ಷ್ಯಗಳ ಬಗ್ಗೆ ಸ್ಪಷ್ಟನೆ ಕೇಳಿತು. ಇನ್ನು ಆರೋಪಿ ಪ್ರಜ್ವಲ್ ರೇವಣ್ಣರನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಇಂದು ನ್ಯಾ. ಗಜಾನನ ಭಟ್ ಅವರು ಸರ್ಕಾರಿ ವಕೀಲ ಎನ್ ಜಗದೀಶ್ ಹಾಗೂ ಅಶೋಕ್ ನಾಯಕ್ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಜಿ ಬಳಿ ಮೊಬೈಲ್ ಸಾಕ್ಷ್ಯ, ತಾಂತ್ರಿಕ ಸಾಕ್ಷ್ಯಗಳ ಬಗ್ಗೆ ಸ್ಪಷ್ಟನೆಗಳನ್ನು ಕೇಳಿದರು. ಇದರೊಂದಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಗ್ಗೆ ನ್ಯಾಯಾಧೀಶರು ಕೆಲ ಮಾಹಿತಿ ಕೇಳಿದರು. ಗೂಗಲ್ ಮ್ಯಾಪ್ ಅನ್ನು ಸಾಕ್ಷಿಯಾಗಿ ಪರಿಗಣಿಸಿಸಬಹುದೇ? ಸ್ಯಾಮ್ಸಂಗ್ ಜೆ 4 ಮೊಬೈಲ್ ಸೀಜ್ ಮಾಡಿರುವ ಬಗ್ಗೆಯೂ ವಿವರಣೆ ಕೇಳಿದೆ.
