ರಿಲಾಯನ್ಸ್ ಇಂಡಸ್ಟ್ರೀಸ್‌ನಲ್ಲಿ ಒಂದ್ ಕೆಲ್ಸ ಸಿಕ್ಕಿದ್ರೆ ಸಾಕಪ್ಪಾ ಲೈಫ್ ಸೆಟಲ್ ಆಗುತ್ತೆ ಅನ್ನೋದು ತುಂಬಾ ಜನರ ಕನಸು. ಆದ್ರೆ 75 ಕೋಟಿ ಸಂಬಳ ಪಡೆಯುತ್ತಿದ್ದ ರಿಲಾಯನ್ಸ್‌ನ ಉಪಾಧ್ಯಕ್ಷ ಹಾಗೂ ಮುಕೇಶ್ ಅಂಬಾನಿ ಅವರ ಬಲಗೈ ಬಂಟ ಪ್ರಕಾಶ್ ಶಾ ಅವರು ಲೌಕಿಕ ಅಸ್ತಿತ್ವವನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಹೌದು, ಇವ್ರು ಜಗತ್ತಿನ ಅತ್ಯಂತ ಶಕ್ತಿಶಾಲಿ ಹಾಗೂ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿಯವರ ರೈಟ್ ಹ್ಯಾಂಡ್. ಹಾಗೆ, ಹಾಗೆ ದೇಶದ ಅತಿದೊಡ್ಡ ಹಾಗೂ ಪ್ರಮುಖ ಸಂಸ್ಥೆಯಾಗಿರುವ ರಿಲಾಯನ್ಸ್‌ನ ಉಪಾಧ್ಯಕ್ಷ ಸ್ಥಾನದಲ್ಲಿದ್ದವರು. ವರದಿಗಳ ಪ್ರಕಾರ, ನಿವೃತ್ತಿ ಅಂತ್ಯದ ವೇಳೆಗೆ ಇವರ ವಾರ್ಷಿಕ ಸಂಬಳ 75 ಕೋಟಿ ರೂಪಾಯಿ ಎಂದು ವರದಿಯಾಗಿದೆ.
ಪೆಟ್ರೋಕೆಮಿಕಲ್ಸ್, ಚಿಲ್ಲರೆ ವ್ಯಾಪಾರ, ದೂರಸಂಪರ್ಕ ಮತ್ತು ಡಿಜಿಟಲ್ ಸೇವೆಗಳಲ್ಲಿ ರಿಲಾಯನ್ಸ್ ಟಾಪ್ ಸ್ಥಾನದಲ್ಲಿದೆ. ಕೇವಲ ದೇಶದಲ್ಲಿ ಮಾತ್ರವಲ್ಲದೇ, ಅಂತಾರಾಷ್ಟ್ರೀಯ ಮಟ್ಟದಲ್ಲೂ ದೃಢವಾದ ನೆಲೆಯನ್ನು ಕಂಡುಕೊಂಡಿದೆ. ಇಂಥ ದೈತ್ಯ ಕಂಪನಿಯನ್ನು ಮುನ್ನಡೆಸೋದು, ಅಷ್ಟು ಸುಲಭದ ಮಾತಲ್ಲ.

ಇಂತಹ ಪವರ್‌ಫುಲ್ ಕಂಪನಿಯ ಉಪಾಧ್ಯಕ್ಷ ಸ್ಥಾನದಲ್ಲಿದ್ದ ಪ್ರಕಾಶ್ ಶಾ ತಮ್ಮ 63ನೇ ವಯಸ್ಸಿನಲ್ಲಿ ಕರ್ತವ್ಯಕ್ಕೆ ಗುಡ್‌ಬೈ ಹೇಳಿದ್ದರು. ಅದಾದ ಸ್ವಲ್ಪ ಸಮಯದಲ್ಲೇ ದೀಕ್ಷೆ ಪಡೆದು ಆಧ್ಯಾತ್ಮಿಕ ಜೀವನಕ್ಕೆ ಪ್ರವೇಶ ಮಾಡಿದ್ದಾರೆ. ಕಳೆದ ಏಪ್ರಿಲ್ನಲ್ಲಿ ಮಹಾವೀರ ಜಯಂತಿಯ ಸಂದರ್ಭದಲ್ಲಿ ಔಪಚಾರಿಕವಾಗಿ ದೀಕ್ಷೆ ಪಡೆದುಕೊಂಡಿದ್ದಾರೆ.
ಅವರ ಹಾದಿಯಲ್ಲೇ ಪತ್ನಿ ನೈನಾ ಶಾ ಹಾಗೂ ಮಗ ಕೂಡ ಸಾಗಿದ್ದಾರೆ. ದೀಕ್ಷೆ ಪಡೆದ ನಂತರ ಭುವನ್ ಜೀತ್ ಮಹಾರಾಜ್ ಎಂದು ಪ್ರಕಾಶ್ ಶಾ ಅವರು ಸರು ಬದಲಾಯಿಸಿಕೊಂಡಿದ್ದಾರೆ.
