ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ತಲಾ ಒಂದು ಕೋಟಿ ರೂ ಪರಿಹಾರ ನೀಡುವುದಾಗಿ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಘೋಷಿಸಿದ್ದಾರೆ. ಈ ಸಂಬಂಧ ಅವರು ಎಕ್ಸ್ ಹ್ಯಾಂಡಲ್ ನಲ್ಲಿ ಪೋಸ್ಟ್ ಹಾಕುವ ಮೂಲಕ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಅನ್ನು ಏರ್ ಇಂಡಿಯಾ ರೀ ಪೋಸ್ಟ್ ಮಾಡಿ ಪರಿಹಾರ ಘೋಷಣೆಯನ್ನು ಖಚಿತ ಪಡಿಸಿದೆ.
ಚಂದ್ರಶೇಖರನ್ ಪೋಸ್ಟ್ ನಲ್ಲಿ ಹೇಳಿರುವುದೇನು?: ಏರ್ ಇಂಡಿಯಾ ವಿಮಾನ AI 171 ದುರಂತ ಘಟನೆಯಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ. ಈ ಕ್ಷಣದಲ್ಲಿ ನಾವು ಅನುಭವಿಸುತ್ತಿರುವ ದುಃಖವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ಮತ್ತು ಗಾಯಗೊಂಡವರೊಂದಿಗೆ ಇವೆ.
ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬ ವ್ಯಕ್ತಿಯ ಕುಟುಂಬಗಳಿಗೆ ಟಾಟಾ ಗ್ರೂಪ್ ₹1 ಕೋಟಿ ರೂ. ಪರಿಹಾರ ನೀಡುತ್ತದೆ. ಗಾಯಗೊಂಡವರ ವೈದ್ಯಕೀಯ ವೆಚ್ಚಗಳನ್ನು ಸಹ ನಾವು ಭರಿಸುತ್ತೇವೆ. ಅವರಿಗೆ ಅಗತ್ಯವಿರುವ ಎಲ್ಲಾ ಆರೈಕೆ ಮತ್ತು ಬೆಂಬಲವನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಹೆಚ್ಚುವರಿಯಾಗಿ, ಬಿ ಜೆ ಮೆಡಿಕಲ್ಸ್ ಹಾಸ್ಟೆಲ್ ನಿರ್ಮಾಣಕ್ಕೆ ನಾವು ಬೆಂಬಲ ನೀಡುತ್ತೇವೆ.
ಈ ಊಹಿಸಲಾಗದ ಸಮಯದಲ್ಲಿ ಸಂತ್ರಸ್ತ ಕುಟುಂಬಗಳು ಮತ್ತು ಸಮುದಾಯಗಳೊಂದಿಗೆ ನಾವು ದೃಢವಾಗಿ ನಿಲ್ಲುತ್ತೇವೆ ಎಂದು ಟಾಟಾ ಗ್ರೂಪ್ ನ ಎಕ್ಸ್ ಹ್ಯಾಂಡಲ್ ನಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾಗಿರುವ ಎನ್ ಚಂದ್ರಶೇಖರನ್ ಘೋಷಿಸಿದ್ದಾರೆ. ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ AI171 ವಿಮಾನ ಇಂದು ಟೇಕ್ ಆಫ್ ಆದ ಕೆಲವೇ ಸಮಯದ ನಂತರ ಅಪಘಾತಕ್ಕೀಡಾಗಿದೆ ಎಂದು ಏರ್ ಇಂಡಿಯಾ ದೃಢಪಡಿಸಿದೆ. ಅಹಮದಾಬಾದ್‌ನಿಂದ ಮಧ್ಯಾಹ್ನ 3.38ಕ್ಕೆ ಹೊರಟ ವಿಮಾನವು ಬೋಯಿಂಗ್ 787-8 ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಈ ಪೈಕಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆ ವಿಮಾನದಲ್ಲಿದ್ದರು.
