ನವದೆಹಲಿ: ಬುರ್ಖಾ ಧರಿಸದೆ ಹೊರಗೆ ಹೋಗಿದ್ದಕ್ಕೆ ಪತ್ನಿ ಹಾಗೂ ಮಕ್ಕಳನ್ನು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ನಂತರ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಡಿ. 10ರಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ 33 ವರ್ಷದ ಫಾರೂಕ್ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದ. ನಂತರ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಕೊಲೆ ಮಾಡಿದ್ದ. ನಂತರ ತನ್ನ ಮನೆಯೊಳಗೆ 3 ಶವಗಳನ್ನು ಹೂತು ಹಾಕಿದ್ದ ಎನ್ನಲಾಗಿದೆ.
ಆರೋಪಿಯು ಪತ್ನಿ ತಾಹಿರಾ (32)ಗೆ ಬುರ್ಖಾ ಹಾಕದೆ ಹೊರಗೆ ಹೋಗುವಂತಿಲ್ಲ ಎಂದು ತಾಕೀತು ಮಾಡಿದ್ದ ಎನ್ನಲಾಗಿದೆ. ಆದರೆ, ಫಾರೂಕ್ ಮನೆಯ ಖರ್ಚುಗಳಿಗೆ ಸರಿಯಾಗಿ ಹಣ ನೀಡದಿದ್ದಕ್ಕೆ ಪತ್ನಿ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಹೀಗೆ ಜಗಳವಾಡಿದ ನಂತರ ಇತ್ತೀಚೆಗೆ ಬುರ್ಖಾ ಧರಿಸದೆ ತಾಹಿರಾ, ಮುಜಫರ್ ನಗರದ ನಾರಾ ಗ್ರಾಮದಲ್ಲಿರುವ ತನ್ನ ತಾಯಿ ಮನೆಗೆ ಹೋಗಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಆರೋಪಿಯು ಡಿ. 10ರಂದು ರಾತ್ರಿ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ನಂತರ ಕೊಲೆಯನ್ನು ನೋಡಿದ್ದ ತನ್ನಿಬ್ಬ ಮಕ್ಕಳನ್ನೂ ಕೊಲೆ ಮಾಡಿ, ಶವಗಳನ್ನು ಮನೆಯಲ್ಲಿಯೇ ಹೂತು ಹಾಕಿದ್ದಾನೆ. ಈ ಬಗ್ಗೆ ಆತನೇ ಒಪ್ಪಿಕೊಂಡಿದ್ದಾನೆ. ತನ್ನ ಹೆಣ್ಣುಮಕ್ಕಳಲ್ಲಿ ಒಬ್ಬಳ ಕಣ್ಣುಗಳನ್ನು ಕೂಡ ಕಿತ್ತುಹಾಕಿದ್ದಾಗಿ ಆತ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
