ಬೆಂಗಳೂರು. ಡಿ.15 : ಕರ್ನಾಟಕದ ಹೃದಯ ಭಾಗವಾದ ದಾವಣಗೆರೆ ಜಿಲ್ಲೆಯ ಧಣಿ, ಕೊಡುಗೈ ದಾನಿ ಎಂತಲೇ ಖ್ಯಾತರಾದ ಉದ್ಯಮಿ, ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ(94) ಭಾನುವಾರ(ಡಿ.14) ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಾಮನೂರು ಶಿವಶಂಕರಪ್ಪ ಅವರಿಗೆ ಕಳೆದೊಂದು ತಿಂಗಳಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಕರ್ನಾಟಕದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದ ನಾಯಕರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮಾತ್ರವಲ್ಲದೇ 94 ವರ್ಷದ ಶಾಮನೂರು ಶಿವಶಂಕರಪ್ಪ ಅವರು ಭಾರತದಲ್ಲೇ ಹಿರಿಯ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆ ಭೇಟಿ ನೀಡಿ ಶಿವಶಂಕರಪ್ಪ ಅವರ ಆರೋಗ್ಯ ಸ್ಥಿತಿ ವಿಚಾರಿಸಿ ವೈದ್ಯರಿಂದ ಮಾಹಿತಿ ಪಡೆದಿದ್ದರು. ಶಾಮನೂರು ಶಿವಶಂಕರಪ್ಪ ಅವರ ಆರೋಗ್ಯ ಸುಧಾರಣೆಯಾಗಲಿ ಎಂದು ದಾವಣಗೆರೆ ಸೇರಿದಂತೆ ವಿವಿಧೆಡೆ ಅಭಿಮಾನಿಗಳಿಂದ ಪ್ರಾರ್ಥನೆ ನೆರವೇರಿತ್ತು. ದುರದೃಷ್ಟವಶಾತ್ ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಜನನ ಮತ್ತು ಹಿನ್ನಲೆ :
ಶಾಮನೂರು ಶಿವಶಂಕರಪ್ಪ ಅವರು 1931 ಜೂನ್ 16ರಂದು ಶಾಮನೂರು ಕಲ್ಲಪ್ಪ ಹಾಗೂ ಶಾಮನೂರು ಸಾವಿತ್ರಮ್ಮ ದಂಪತಿ ಪುತ್ರನಾಗಿ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು. ಪತ್ನಿ ಪಾರ್ವತಮ್ಮ. ಮೂವರು ಪುತ್ರರಾದ ಎಸ್.ಎಸ್ ಬಕ್ಕೇಶ್, ಎಸ್.ಎಸ್ ಗಣೇಶ್, ಎಸ್.ಎಸ್ ಮಲ್ಲಿಕಾರ್ಜುನ್ ಮತ್ತು ನಾಲ್ವರು ಪುತ್ರಿಯರಾದ ಡಾ.ಮಂಜುಳಾ ಶಿವಶಂಕರ್, ಸುಧಾ ಪಾಟೀಲ್, ಡಾ.ಶೈಲಜಾ ಭಟ್ಟಾಚಾರ್ಯ, ಮೀನಾ ಡಾ.ಶರಣ್ ಪಾಟೀಲ್ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.
ರಾಜಕೀಯ ಪಯಣ :
ಶಿವಶಂಕರಪ್ಪನವರು 1969ರಲ್ಲಿ ಮೊದಲ ಬಾರಿಗೆ ದಾವಣಗೆರೆ ಪುರಸಭೆ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. 1971 ರಿಂದ 1973ರ ವರೆಗೆ ಅವಿಭಜಿತ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1980ರಲ್ಲಿ ಲೋಕಸಭಾ ಚುನಾವಣೆಗೆ ಅರಸು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇಂದಿರಾ ಗಾಂಧಿ ಕಾಂಗ್ರೆಸ್ ಅಭ್ಯರ್ಥಿ ಟಿ.ವಿ ಚಂದ್ರಶೇಖರಪ್ಪರ ವಿರುದ್ಧ ಪರಾಭವಗೊಂಡರು. ಇದಾದ ಬಳಿಕ 1994ರಲ್ಲಿ ನಡೆದ 10ನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಖಾಡಕ್ಕಿಳಿದ ಅವರು ಬಿಜೆಪಿ ಅಭ್ಯರ್ಥಿ ಕೆ.ಬಿ ಶಂಕರನಾರಾಯಣರನ್ನ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1997 ರಲ್ಲಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸಿದ ಶಿವಶಂಕರಪ್ಪ, ಬಿಜೆಪಿ ಅಭ್ಯರ್ಥಿ ಜಿ.ಮಲ್ಲಿಕಾರ್ಜುನಪ್ಪ ಅವರನ್ನ ಸೋಲಿಸಿ ಸಂಸದರಾದರು. 2004 ರಲ್ಲಿ ಶಿವಶಂಕರಪ್ಪ 2ನೇ ಬಾರಿ ಶಾಸಕರಾಗಿ ಆಯ್ಕೆಯಾದರು. ಆನಂತರ ಸತತವಾಗಿ 2008, 2013, 2018, ಹಾಗೂ ಕಳೆದ 2023ರಲ್ಲಿ ಪುನಃ ಶಾಸಕರಾಗಿ ಆಯ್ಕೆಯಾದರು. 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂಪುಟದಲ್ಲಿ ಎರಡೂವರೆ ವರ್ಷ ತೋಟಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ದಾವಣಗೆರೆಗೆಯಲ್ಲಿ ಶಿಕ್ಷಣ ಸಂಸ್ಥೆ ಹಾಗೂ ಕೈಗಾರಿಕೆ ಸ್ಥಾಪನೆ :
ಶಿವಶಂಕರಪ್ಪನವರು ದಾವಣಗೆರೆಯಲ್ಲಿ ಇಂಟರ್ ಮೀಡಿಯೆಟ್ (12ನೇ ತರಗತಿ) ವರೆಗೆ ಶಿಕ್ಷಣವನ್ನು ಪೂರೈಸಿದ ನಂತರ, ಅವರು ಉದ್ಯಮ ಮತ್ತು ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಉದ್ಯಮಿಯಾಗಿ, ಶಿವಶಂಕರಪ್ಪನವರು ಬಾಪೂಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಂತರ ಈ ಸಂಸ್ಥೆಯ ಅಡಿಯಲ್ಲಿ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೇರಿದಂತೆ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿ ವಿದ್ಯಾಕಾಶಿಯಾಗಿ ಪರಿವರ್ತನೆ ಮಾಡಿದ ಧುರೀಣರಾಗಿದ್ದಾರೆ. ಅಲ್ಲದೆ, ಅವರು ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳನ್ನು ಒಳಗೊಂಡಿರುವ ಶಾಮನೂರು ಗ್ರೂಪ್ ಅನ್ನು ಸ್ಥಾಪಿಸಿದರು.
ರಾಜಕೀಯ ಭೀಷ್ಮನಿಗೆ ಗಣ್ಯರಿಂದ ಸಂತಾಪ :
ರಾಜ್ಯ ರಾಜಕಾರಣದ ಭೀಷ್ಮರಂತಿದ್ದ ಶಾಮನೂರು ಶಿವಶಂಕರಪ್ಪ ವಿಧಿವಶರಾದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಡಿಸಿಎಂ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಆರ್. ಅಶೋಕ್, ಸಚಿವರಾದ ಈಶ್ವರ್ ಖಂಡ್ರೆ, ಜಿ. ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪತ್ನಿ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ :
ಶಾಮನೂರು ಶಿವಶಂಕರಪ್ಪನವರ ಅಂತಿಮ ದರ್ಶನದ ಬಳಿಕ ದಾವಣಗೆರೆಯ ಪ್ರಮುಖ ರಸ್ತೆಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದ್ದು, ಇಂದು (ಸೋಮವಾರ) ಸಂಜೆ 05 ಗಂಟೆಯ ವೇಳೆಗೆ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಶಾಮನೂರು ಅವರ ಧರ್ಮಪತ್ನಿ ಪಾರ್ವತಮ್ಮ ಸಮಾಧಿ ಕಲ್ಲೇಶ್ವರ ಮಿಲ್‌ನ ಆವರಣದಲ್ಲಿದೆ ಅದರ ಪಕ್ಕದಲ್ಲಿಯೇ ಶಾಮನೂರು ಶಿವಶಂಕರಪ್ಪನವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
