ಬೆಳಗಾವಿ: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಯ ವಿಚಾರ ದೊಡ್ಡ ಚರ್ಚಿತ ವಿಷಯವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳ ಮಧ್ಯೆ ಇದು ದೊಡ್ಡ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಈ ಮಧ್ಯೆ ಚಳಿಗಾಲದ ಅಧಿವೇಶನದಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ನಾನೇ ಸಿಎಂ ಎಂದು ಹೇಳಿದ್ದಾರೆ.
ಸದನದಲ್ಲಿ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ನೀವೇ ಐದು ವರ್ಷ ಸಿಎಂ ಆಗಿರುತ್ತೀರಾ ಸರ್ ಎಂದು ಆರ್. ಅಶೋಕ್ (R.Ashok) ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ (Siddaramaiah) ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.
ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಷೇರು ಧನ ಕೊಡುವ ವಿಚಾರದಲ್ಲಿ ತಾರತಮ್ಯ ಆಗಿದೆ ಎಂದು ಸದನದಲ್ಲಿ ಕುಣಿಗಲ್ ರಂಗನಾಥ್ ಪ್ರಶ್ನಿಸಿದ್ದರು. ಆ ವೇಳೆ ಈ ಸ್ವಾರಸ್ಯಕರ ಚರ್ಚೆ ನಡೆಯಿತು.
ಐದು ವರ್ಷ ನೀವೇ ಇರಿ ಎಂದು ಜನರು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ. ಅದನ್ನು ನೀನ್ಯಾಕೇ ಕೇಳ್ತೀಯಾ? ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆಗ ಆರ್. ಅಶೋಕ್, ನಾವು ಎದುರು ಮನೆಯವರು ಸರ್, ಕೇಳ್ತೀವಿ ಅಂತಾ ಹೇಳಿ ಮತ್ತೊಮ್ಮೆ ಪ್ರಶ್ನೆ ಮಾಡುತ್ತಾರೆ. ಆ ವೇಳೆ ಮಧ್ಯ ಪ್ರವೇಶಿಸಿದ ಜಿ. ಪರಮೇಶ್ವರ್, ಜನ ಐದು ವರ್ಷ ಆಡಳಿತ ಮಾಡಿ ಅಂತ ಆಶೀರ್ವಾದ ಮಾಡಿದ್ದಾರೆ. ಐದು ವರ್ಷ ನಾವು ಇರುತ್ತೇವೆ ಅಂದ ಮೇಲೆ ನಿಮಗೆ ಏಕೆ ಅನುಮಾನ ಅಂತಾರೆ. ಮತ್ತೆ ಅಶೋಕ್, ಪರಮೇಶ್ವರ್ ಯಾವಾಗಲೂ ನಿಮ್ಮ ಜತೆ ನಿಂತಿದ್ದಾರೆ ಸರ್, ಏನಾದರೂ ಅವಕಾಶ ಆದರೆ ಬ್ಲ್ಯಾಕ್ ಹಾರಿಸ್ತಾರೆ ಎಂದು ಅಶೋಕ್ ಟಾಂಗ್ ಕೊಡುತ್ತಾರೆ.
ಆಗ ಸಿಎಂ, ಬಿಜೆಪಿಯನ್ನು ಜನ ಯಾವತ್ತೂ ಅಧಿಕಾರಕ್ಕೆ ತರಲ್ಲ. ಜನರ ಆಶೀರ್ವಾದ ಪಡೆದು ನೀವು ಯಾವತ್ತಾದರೂ ಅಧಿಕಾರಕ್ಕೆ ಬಂದಿದೀರಾ? ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನ ಮೂಲಕವೇ ನೀವು ಅಧಿಕಾರ ಪಡೆದಿದ್ದೀರಿ ಎಂದು ಸಿಎಂ ಟಾಂಗ್ ಮತ್ತೊಮ್ಮೆ ಕಿಚಾಯಿಸಿದ್ದಾರೆ.
