Advertisement

ಬೆಂಗಳೂರು, ಫೆ.23: ಸ್ಟಾರ್‌ ಕಪಲ್‌ಗಳ ಸಾಲಿಗೆ ಸೇರ್ಪಡೆಯಾಗೋದಿಕ್ಕೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಸಜ್ಜಾಗಿದ್ದಾರೆ. ಬಹುಕಾಲದಿಂದ ಗಾಸಿಪ್‌ಗಳಿಗೆ ಕಾರಣವಾಗಿದ್ದ ಈ ಜೋಡಿ ಇದೀಗ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಇದೇ ಫೆಬ್ರವರಿ 26ರಂದು ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಲಿದ್ದು, ಈ ಹಿನ್ನೆಲೆ ರಾಜಸ್ಥಾನದ ಉದಯಪುರ ನಗರಕ್ಕೆ ಆಗಮಿಸಿದ್ದಾರೆ. ನಿನ್ನೆಯಷ್ಟೇ ರಶ್ಮಿಕಾ ಹಾಗೂ ವಿಜಯ್‌ ದೇವರಕೊಂಡ ತಮ್ಮ ಮದುವೆ ವಿಚಾರವನ್ನು ಸೋಷಿಯಲ್‌ ಮೀಡಿಯಾ ಮೂಲಕ ಖಚಿತಪಡಿಸಿದ್ದರು.

ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಮದುವೆಯನ್ನು ಅಧಿಕೃತವಾಗಿ ಘೋಷಿಸಿದ್ದು, ತಮ್ಮ ಜೋಡಿಗೆ ಅಭಿಮಾನಿಗಳು ನೀಡಿದ “ವಿರೋಷ್” ಎಂಬ ಹೆಸರನ್ನೇ ಮದುವೆ ಸಮಾರಂಭದ ಶೀರ್ಷಿಕೆಯಾಗಿಸಿಕೊಂಡಿದ್ದಾರೆ. “ನಮ್ಮ ಮೇಲೆ ನೀವು ತೋರಿದ ಪ್ರೀತಿಗೆ ಗೌರವವಾಗಿ ನಮ್ಮ ಒಂದಾಗುವಿಕೆಯನ್ನು ‘ವಿರೋಷ್ ವಿವಾಹ’ ಎಂದು ಕರೆಯಲು ಬಯಸುತ್ತೇವೆ” ಎಂದು ಈ ಜೋಡಿ ಭಾವನಾತ್ಮಕವಾಗಿ ಹಂಚಿಕೊಂಡಿದೆ. ಕೊನೆಗೆ ಮದುವೆ ವಿಚಾರದ ಬಗ್ಗೆ ಅಪ್‌ಡೇಟ್‌ ಕೊಟ್ಟಿದ್ದರಿಂದ ಅಭಿಮಾನಿಗಳಲ್ಲಿದ್ದ ಗೊಂದಲ ದೂರವಾಗಿದೆ.

ಉದಯಪುರ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಪ್ರತ್ಯೇಕವಾಗಿ ಹೊರಬಂದರೂ, ಒಂದೇ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದು ಗಮನಸೆಳೆದಿದೆ. ಇಬ್ಬರ ಬಟ್ಟೆಗಳು ಮ್ಯಾಚಿಂಗ್‌ನಲ್ಲಿದ್ದು, ಒಟ್ಟಿಗೆ ಬಂದು ಪ್ರತ್ಯೇಕವಾಗಿ ಅಲ್ಲಿಂದ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಅಲ್ಲಿದ್ದ ಅಭಿಮಾನಿಗಳು ಮತ್ತು ಛಾಯಾಗ್ರಾಹಕರು ಇವರ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಇವು ವೈರಲ್‌ ಆಗಿವೆ.

ಗೀತಗೋವಿಂದಂ ಚಿತ್ರದ ಮೂಲಕ ಮೊದಲ ಬಾರಿ ಒಂದಾಗಿ ತೆರೆ ಮೇಲೆ ಕಾಣಿಸಿಕೊಂಡ ಈ ಜೋಡಿ, ನಂತರ ಡಿಯರ್‌ ಕಾಮ್ರೇಡ್‌ ಚಿತ್ರದಲ್ಲೂ ಜೊತೆಯಾಗಿ ನಟಿಸಿತ್ತು. ಈ ಅವಧಿಯಲ್ಲೇ ಇಬ್ಬರ ಸಂಬಂಧದ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡಿದ್ದವು. ಈಗ ಆ ವದಂತಿಗಳಿಗೆ ತೆರೆ ಎಳೆದು, ಇಬ್ಬರೂ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮದುವೆ ಸಮಾರಂಭ ಆತ್ಮೀಯರ ಸಮ್ಮುಖದಲ್ಲಿ ಫೆಬ್ರವರಿ 26ರಂದು ಉದಯಪುರದಲ್ಲಿ ನಡೆಯಲಿದ್ದು, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಭವ್ಯ ಸ್ವಾಗತ ಸಮಾರಂಭ ನಡೆಯುವ ನಿರೀಕ್ಷೆಯಿದೆ. ಆಗ ಚಿತ್ರರಂಗದ ಗಣ್ಯರೆಲ್ಲರೂ ಈ ಜೋಡಿಗೆ ಶುಭಕೋರಲಿದ್ದಾರೆ ಎನ್ನಲಾಗಿದೆ. ಚಿತ್ರರಂಗದ ಜನಪ್ರಿಯ ಜೋಡಿ ‘ವಿರೋಷ್’ ವಿವಾಹ ಸಂಭ್ರಮಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.

ವರದಿಗಳ ಪ್ರಕಾರ, ಮದುವೆ ಸಮಾರಂಭವು ನಗರದಿಂದ ಸುಮಾರು 25 ಕಿಮೀ ದೂರದಲ್ಲಿರುವ ಐಟಿಸಿ ಹೋಟೆಲ್ಸ್‌ ಆವರಣದಲ್ಲಿ ನಡೆಯಲಿದೆ. ಇದು ಸುಂದರ ಅರಾವಳಿ ಪರ್ವತ ಶ್ರೇಣಿಯ ಮಧ್ಯೆ ನೆಲೆಸಿದ್ದು, ಸಾರ್ವಜನಿಕ ದೃಷ್ಟಿಯಿಂದ ಸಂಪೂರ್ಣ ದೂರದಲ್ಲಿರುವುದರಿಂದ ಖಾಸಗಿ ಹಾಗೂ ಆತ್ಮೀಯ ಸಮಾರಂಭಕ್ಕೆ ಸೂಕ್ತ ಸ್ಥಳವೆಂದು ಹೇಳಲಾಗಿದೆ.

ಜೋಡಿ ಆಗಮನದ ಹಿನ್ನೆಲೆಯಲ್ಲಿ ಉದಯಪುರ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅತಿಥಿಗಳು ವಾಣಿಜ್ಯ ವಿಮಾನಗಳ ಮೂಲಕ ಉದಯಪುರಕ್ಕೆ ಆಗಮಿಸಲಿದ್ದಾರೆ. ಫೆಬ್ರವರಿ 26ರಂದು ರಾಜಸ್ಥಾನದ ಪರಂಪರೆಯ ಅರಮನೆ ಶೈಲಿಯ ಸ್ಥಳದಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ ಕೇವಲ ಕುಟುಂಬ ಸದಸ್ಯರು ಹಾಗೂ ಆಪ್ತರು ಮಾತ್ರ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಕಠಿಣ ‘ನೋ-ಫೋನ್’ ನೀತಿ ಜಾರಿಯಾಗಿದ್ದು, ಸಂಪೂರ್ಣ ಗೌಪ್ಯತೆ ಕಾಪಾಡಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾರೂ ಮೊಬೈಲ್‌ ಬಳಸುವಂತಿಲ್ಲ. ಕಠಿಣ ಭದ್ರತೆ ಮತ್ತು ಸಂಪೂರ್ಣ ಗೌಪ್ಯತೆಯೊಂದಿಗೆ ನಡೆಯಲಿರುವ ‘ವಿರೋಷ್’ ಮದುವೆ ಈಗಾಗಲೇ ದೇಶದಾದ್ಯಂತ ಕುತೂಹಲ ಹುಟ್ಟಿಸಿದೆ.

Share.
Leave A Reply