ಬೆಂಗಳೂರು, ಫೆ.25: ನ್ಯಾಷನಲ್ ಕ್ರಶ್, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆಗೆ ಕ್ಷಣಗಣನೆ ಶುರುವಾಗಿದೆ. ಕರ್ನಾಟಕದ ಮನೆ ಮಗಳು ಈಗ ತೆಲುಗು ರಾಜ್ಯದ ಸೊಸೆಯಾಗಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸೀಕ್ರೆಟ್ ಆಗಿ ಲವ್ ಮಾಡುತ್ತಿದ್ದ ಇಬ್ಬರೂ ಇದೀಗ ಸತಿಪತಿಗಳಾಗಲು ಮುಂದಾಗಿದ್ದು, ಜೈಪುರದ ಭವ್ಯ ಅರಮನೆಯಂತಾ ಹೆರಿಟೇಜ್‌ನಲ್ಲಿ ಕಲ್ಯಾಣ ಜರುಗಲಿದೆ. ಹಾಗಾದರೆ, ಇಬ್ಬರ ಮದುವೆ ಹೇಗೆ ನಡೆಯುತ್ತೆ? ಒಂದೇ ಮಂಟಪದಲ್ಲಿ ಎರಡೆರಡು ಬಾರಿ ಮದುವೆ ಆಗೋದೇಕೆ ರಶ್-ವಿಜಯ್ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಹೌದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸುವ ಮೂಲಕ ರಶ್ಮಿಕಾ ಸಿನಿ ಇಂಡಸ್ಟ್ರಿಗೆ ಕಾಲಿಟ್ಟದ್ದರು. ಆ ಸಿನಿಮಾ ಶೂಟಿಂಗ್ ಸೆಟ್‌ನಲ್ಲೇ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಧ್ಯೆ ಲವ್ ಶುರುವಾಗಿ, ಇಬ್ಬರೂ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ಆದ್ರೆ, ಆ ಎಂಗೇಜ್‌ಮೆಂಟ್ ಎರಡು ವರ್ಷದಲ್ಲೇ ಮುರಿದು ಬಿದ್ದಿತ್ತು. ಇದಾದ ನಂತರ ತೆಲುಗಿಗೆ ಹಾರಿದ್ದ ರಶ್ಮಿಕಾ ಮಂದಣ್ಣ ಹಿಂದೆ ತಿರುಗಿ ನೋಡಲೇ ಇಲ್ಲ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ರಶ್ಮಿಕಾ ನ್ಯಾಷನಲ್ ಕ್ರಶ್ ಆಗಿ ಬೆಳೆದು ಬಿಟ್ಟರು.
ಇನ್ನು, ಕಿರಿಕ್ ಪಾರ್ಟಿ ಸಿನಿಮಾದ ನಂತರ ರಶ್ಮಿಕಾ ತೆಲುಗಿನ ಗೀತ ಗೋವಿಂದಂ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ವಿಜಯ್ ದೇವರಕೊಂಡ ಜೊತೆಗೆ ಆ ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದರು. ಆ ಚಿತ್ರವನ್ನು ಸಿನಿ ರಸಿಕರು ಮೆಚ್ಚಿಕೊಂಡ್ರೆ, ಇತ್ತ ವಿಜಯ್ ಹಾಗೂ ರಶ್ಮಿಕಾ ಮಧ್ಯೆ ಲವ್ ಟ್ರ್ಯಾಕ್ ಓಪನ್ ಆಗಿತ್ತು. ಅಲ್ಲಿಂದ ಶುರುವಾಗಿದ್ದ ಲವ್ ಸ್ಟೋರಿ ಇಲ್ಲಿವರೆಗೂ ಸೀಕ್ರೆಟ್ ಆಗಿಯೇ ಉಳಿದಿತ್ತು. ಮಾಲ್ಡೀವ್ಸ್‌ಗೆ ಹೋಗಿ ಫೋಟೋಸ್ ಹಾಕಿದ್ರೂ ಸುಳಿವು ಕೊಟ್ಟಿರಲಿಲ್ಲ. ರಿಂಗ್ ಬದಲಿಸಿಕೊಂಡರೂ ಸಣ್ಣ ಕ್ಲೂ ಬಿಟ್ಟಿರಲಿಲ್ಲ. ಆದ್ರೆ, ಕಳೆದ ವಾರವಷ್ಟೇ ಇಬ್ಬರೂ ಅಧಿಕೃತವಾಗಿ ಮದುವೆ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದು, ರಾಜಸ್ಥಾನದ ಅರಮನೆಯಲ್ಲಿ ಸಪ್ತಪದಿ ತುಳಿಯುತ್ತಿದ್ದಾರೆ.

ರಾಜಸ್ಥಾನದ ಉದಯಪುರದ ಬಳಿಯ ಐಷಾರಾಮಿ ರೆಸಾರ್ಟ್ನಲ್ಲಿ ರಶ್ಮಿಕಾ-ವಿಜಯ್ ವಿವಾಹ ಆಗುತ್ತಿದ್ದು, ಈ ಮದುವೆ ಬಲು ಅದ್ಧೂರಿಯಾಗಿಯೂ ಜೊತೆಗೆ ಅತ್ಯಂತ ಖಾಸಗಿಯಾಗಿಯೂ ಇರಲಿದೆ. ಇಂದು ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಫೆಬ್ರವರಿ 26 ಮದುವೆ ಕಾರ್ಯ ನಡೆಯಲಿದೆ. ವಿಶೇಷವೆಂದರೆ ರಶ್ಮಿಕಾ ಮತ್ತು ವಿಜಯ್ ಅವರು ಒಂದಲ್ಲ 2 ಬಾರಿ ಮದುವೆ ಆಗ್ತಿದ್ದು, ಏನಿದು ವಿಶೇಷ ಅಂತಾ ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ.
ಸಾಮಾನ್ಯವಾಗಿ ಎರಡು ಬೇರೆ ಧರ್ಮದವರು ಮದುವೆ ಆದಾಗ ಹೀಗೆ ಎರಡೆರಡು ಬಾರಿ ಮದುವೆ ಆಗುವ ಸಂಪ್ರದಾಯ ಇದೆ. ಆದರೆ ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಹಿಂದೂ ಧರ್ಮದವರೇ ಆಗಿದ್ದರೂ ಸಹ ಈ ಜೋಡಿ ಎರಡೆರಡು ಬಾರಿ ಮದುವೆ ಆಗುತ್ತಿದೆ. ಅದು ಹೇಗೆ ಎಂದರೆ ಫೆಬ್ರವರಿ 26ರ ಬೆಳಗ್ಗೆ ವಿಜಯ್ ದೇವರಕೊಂಡ ಅವರ ಕುಟುಂಬ ಮತ್ತು ಸಮುದಾಯದ ಸಂಪ್ರದಾಯದಂತೆ ಮದುವೆ ನಡೆಯಲಿದೆ. ವಿಜಯ್ ದೇವರಕೊಂಡ ಅವರ ತೆಲುಗು ಸಂಪ್ರದಾಯದಂತೆ ನಾಳೆ ಬೆಳಗ್ಗೆ ಮದುವೆ ಕಾರ್ಯ ನಡೆಯಲಿದೆ. ಅದಾದ ಬಳಿಕ ಸಂಜೆ ವೇಳೆಗೆ ರಶ್ಮಿಕಾ ಅವರ ಕೊಡವ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಎರಡೂ ಕುಟುಂಬಗಳ ಸಂಪ್ರದಾಯ ಗೌರವಿಸಲೆಂದು ಈ ನಿರ್ಧಾರವನ್ನು ಮಾಡಲಾಗಿದೆ ಅಂತಾ ಹೇಳಲಾಗ್ತಿದೆ.
ಇಂದು ಸಂಜೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಈಗಾಗಲೇ ಅವರ ಆಪ್ತ ಗೆಳೆಯರು ಉದಯಪುರದಲ್ಲಿ ಬೀಡುಬಿಟ್ಟಿದ್ದು, ಮದುವೆ ಕಾರ್ಯದಲ್ಲಿ ಭಾಗಿ ಆಗಿದ್ದಾರೆ. ಕನ್ನಡದ ನಟಿ ಆಶಿಕಾ ರಂಗನಾಥ್ ಸಹ ಭಾಗಿ ಆಗಿದ್ದಾರೆ. ನಾಳೆ ಮದುವೆ ಕಾರ್ಯ ಮುಗಿಯಲಿದ್ದು, ಮಾರ್ಚ್ 4 ರಂದು ಹೈದರಾಬಾದ್ನ ತಾಜ್ ಕೃಷ್ಣ ಹೋಟೆಲ್ನಲ್ಲಿ ಅದ್ಧೂರಿ ರಿಸೆಪ್ಷನ್ ಆಯೋಜಿಸಲಾಗಿದೆ. ರಿಸೆಪ್ಷನ್ನಲ್ಲಿ ಚಿತ್ರರಂಗದ ಹಲವಾರು ಮಂದಿ ಗಣ್ಯರು ಮತ್ತು ರಾಜಕಾರಣಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಒಟ್ನಲ್ಲಿ, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಬಹುಕಾಲದ ಲವ್ ನಂತ್ರ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಆಪ್ತರು, ಕುಟುಂಬಸ್ಥರು ಮಾತ್ರ ಭಾಗಿಯಾಗಲಿದ್ದಾರೆ. ಈ ಮದ್ವೆಗೆ ಮೊಬೈಲ್ ನಿಷೇಧ ಮಾಡಿರೋದು ಇನ್ನೊಂದು ವಿಶೇಷ.
