Advertisement

ಬೆಂಗಳೂರು, ಫೆ.25: ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡಗೆ ಪ್ರಧಾನಿ ನರೇಂದ್ರ ಮೋದಿಯವರು ಶುಭ ಹಾರೈಸಿದ್ದಾರೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಮದುವೆ ಹಾಗೂ ಮಾರ್ಚ್‌ 4ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ರಿಸೆಪ್ಷನ್‌ ನಡೆಯಲಿದ್ದು, ಹಲವು ಗಣ್ಯರು, ರಾಜಕಾರಣಿಗಳು ಆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ವಿಜಯ್ ದೇವರಕೊಂಡ ಅವರ ತಂದೆ ಮತ್ತು ತಾಯಿ ಅವರು, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಆಹ್ವಾನ ಪತ್ರಿಕೆಯನ್ನು ನೀಡಿ ಹಲವು ಗಣ್ಯರನ್ನು ಇನ್ವೈಟ್‌ ಮಾಡಿದ್ದಾರೆ. ಹಾಗೆಯೇ ಪ್ರಧಾನಿ ಮೋದಿ ಅವರಿಗೂ ಇನ್ವಿಟೇಷನ್‌ ಕಳುಹಿಸಿದ್ದರು. ಇದೀಗ ಮೋದಿ ಅವರು ವಿಜಯ್ ದೇವರಕೊಂಡ ಪೋಷಕರ ಹೆಸರು ಸೂಚಿಸಿ ಪತ್ರ ಬರೆದು ವಧು-ವರರಿಗೆ ಶುಭ ಹಾರೈಸಿದ್ದಾರೆ. ಫೆಬ್ರವರಿ 26, 2026ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ನೀವು ನೀಡಿದ ಆಮಂತ್ರಣವನ್ನು ಸ್ವೀಕರಿಸಿ ಬಹಳ ಸಂತೋಷವಾಯಿತು. ಈ ಅತ್ಯಂತ ಹರ್ಷದಾಯಕ ಮತ್ತು ಮಂಗಳಕರ ಸಂದರ್ಭದಲ್ಲಿ ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಇದು ವಿಜಯ್ ಮತ್ತು ರಶ್ಮಿಕಾ ಅವರ ಜೀವನದಲ್ಲಿ ಒಂದು ಹೊಸ, ಸುಂದರ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ‘ಸಖಾ ಸಪ್ತಪದಾ ಭವ’ ಅಂದರೆ ಏಳು ಹೆಜ್ಜೆಗಳನ್ನು ಜೊತೆಯಾಗಿ ನಡೆಯುವ ಮೂಲಕ ದಂಪತಿಗಳು ಜೀವನಪರ್ಯಂತ ಸ್ನೇಹಿತರಾಗುತ್ತಾರೆ ಎಂಬ ಭಾವನೆಯೊಂದಿಗೆ ಈ ಪಯಣ ಆರಂಭವಾಗುತ್ತಿದೆ. ವಿಜಯ್ ಆಗಲಿ ರಶ್ಮಿಕಾ ಆಗಲಿ ತಮ್ಮ ಚಲನಚಿತ್ರಗಳ ಚಿತ್ರಕಥೆಗಳಿಗೆ ಹೊಸಬರೇನಲ್ಲ. ಆದರೆ ಪ್ರೀತಿ ಮತ್ತು ಅನುರಾಗದಿಂದ ತುಂಬಿದ ದೈವಿಕವಾಗಿ ಬರೆಯಲ್ಪಟ್ಟ ಅವರ ನಿಜ ಜೀವನದ ಈ ಅಧ್ಯಾಯವು, ಅವರು ಬೆಳ್ಳಿತೆರೆಯ ಮೇಲೆ ಸೃಷ್ಟಿಸಿದ ಮ್ಯಾಜಿಕ್‌ಗಿಂತ ಖಂಡಿತವಾಗಿಯೂ ಮಿಗಿಲಾಗಿರುತ್ತದೆ ಎಂದಿದ್ದಾರೆ.

ಮುಂಬರುವ ದಿನಗಳು, ತಿಂಗಳುಗಳು, ವರ್ಷಗಳು ಮತ್ತು ಹಂಚಿಕೊಂಡ ಕನಸುಗಳು ಸಾಕಾರದಿಂದ ತುಂಬಿರಲಿ. ಪರಸ್ಪರ ಕಾಳಜಿ ಮತ್ತು ಪ್ರೀತಿಯಿಂದ ಅವರು ಜವಾಬ್ದಾರಿಗಳನ್ನು ಹಂಚಿಕೊಳ್ಳಲಿ, ಪರಸ್ಪರರ ಅಪೂರ್ಣತೆಗಳನ್ನು ಅಪ್ಪಿಕೊಳ್ಳಲಿ, ಒಬ್ಬರ ಬಲದಿಂದ ಇನ್ನೊಬ್ಬರು ಕಲಿಯಲಿ ಮತ್ತು ನಿಜವಾದ ಪಾಲುದಾರರಾಗಿ ಜೀವನದ ಪಯಣವನ್ನು ಸಾಗಿಸಲಿ ಎಂದು ಹಾರೈಸುತ್ತೇನೆ. ಈ ಮಹತ್ವದ ಸಂದರ್ಭದಲ್ಲಿ ದಂಪತಿಗಳಿಗೆ ಮತ್ತು ಕುಟುಂಬಗಳಿಗೆ ನನ್ನ ಆಶೀರ್ವಾದಗಳು ಮತ್ತು ಶುಭ ಹಾರೈಕೆಗಳು ಎಂದು ಪ್ರಧಾನಿಯವರು ಪತ್ರದಲ್ಲಿ ಬರೆದಿದ್ದಾರೆ. ಈ ಮೂಲಕ ನವ ದಂಪತಿಗೆ ಶುಭಹಾರೈಸಿದ್ದು, ವಿರೋಶ್‌ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Share.
Leave A Reply