ಚಾಮರಾಜನಗರ: ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, 28 ದಿನಗಳಲ್ಲಿ 2,53,98,859 ರೂ. ಕಾಣಿಕೆ ಹರಿದು ಬಂದಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಸಾಲೂರು ಬೃಹನ್ಮಠಾಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮಿ ಸಾನಿಧ್ಯದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಕರ್ನಾಟಕ ಆರ್ಥಿಕ ಸೇವೆಯ ಹಿರಿಯ ಶ್ರೇಣಿ ಅಧಿಕಾರಿ (Senior Officer) ರಘು ನೇತೃತ್ವದಲ್ಲಿ ಎಣಿಕೆ ಕಾರ್ಯ (Counting) ನಡೆಯಿತು. 28 ದಿನಗಳಿಂದ ಸಂಗ್ರಹವಾಗಿದ್ದ ಹುಂಡಿ ಹಾಗೂ ಇ ಹುಂಡಿ ಎಣಿಕೆ ಕಾರ್ಯ ಇಂದು ಬೆಳಗ್ಗೆ ಆರಂಭವಾಗಿತ್ತು. ಈ ವೇಳೆ 2.5 ಕೋಟಿ ರೂ.ಗೂ ಅಧಿಕ ಕಾಣಿಕೆ ಬಂದಿದೆ. ಇದರೊಂದಿಗೆ 25 ಗ್ರಾಂ ಚಿನ್ನ ಹಾಗೂ 1.253 ಕೆಜಿ ಬೆಳ್ಳಿ ಬಂದಿದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.
ಎಣಿಕೆ ಕಾರ್ಯದಲ್ಲಿ ಜಿಲ್ಲಾಡಳಿತ ಹಲವಾರು ಅಧಿಕಾರಿಗಳು, ಸಿಬ್ಬಂದಿ ಕೂಡ ಭಾಗವಹಿಸಿದ್ದರು. ಕಾರ್ತಿಕ ಮಾಸ ಇರುವ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರನ ದರ್ಶನಕ್ಕೆ ಹೆಚ್ಚಿನ ಭಕ್ತರು ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಣಿಕೆ ಹೆಚ್ಚು ಸಂಗ್ರಹವಾಗಿದೆ ಎನ್ನಲಾಗಿದೆ.
