ಕನ್ನಡದ ತಂಟೆಗೆ ಬಂದ ಕಮಲ್ ಹಾಸನ್ (Kamal Haasan)ಗೆ ಹೈಕೋರ್ಟ್ ಬಿಸಿ ಮುಟ್ಟಿಸಿದೆ.. ಕನ್ನಡಿಗರಿಗೆ ಸೆಡ್ಡು ಹೊಡೆದು, ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಮಾಡಲು ಹೈಕೋರ್ಟ್ ಮೆಟ್ಟಿಲೇರಿದ್ದ ನಟ ಕಮಲ್ ಹಾಸನ್ ಅವರಿಗೆ ಹಿನ್ನಡೆಯಾಗಿದೆ. ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ ಕ್ಷಮೆ ಕೇಳಲು ನಿರಾಕರಿಸಿರುವ ನಟ ಕಮಲ್ ಹಾಸನ್‌ಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ.
ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರ ಪೀಠದಲ್ಲಿ ನಡೀತು. ಈ ವೇಳೆ ಕಮಲ್ ಹಾಸನ್‌ರನ್ನ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.. ಇನ್ನು ಕಮಲ್ ಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪ ಅವರು ಫಿಲ್ಮ್ ಚೇಂಬರ್ ಜೊತೆ ಮಾತುಕತೆ ನಡೆಸಲು ಒಂದು ವಾರಗಳ ಸಮಯ ಕೋರಿದರು.
ಅರ್ಜಿದಾರರ ಪರ ವಕೀಲರೇ 1 ವಾರಗಳ ಸಮಯ ಕೇಳಿದರಿಂದ ಈ ಸಮಸ್ಯೆ ಬಗೆಹರಿಯುವವರೆಗೂ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಪ್ರದರ್ಶನ ಇಲ್ಲ. ವಾದ ಪ್ರತಿವಾದ ಆಲಿಸಿದ ಏಕಸದಸ್ಯ ಪೀಠವು ಸದ್ಯಕ್ಕೆ ಸಿನಿಮಾ ಬಿಡುಗಡೆ ಮಾಡದಂತೆ ಆದೇಶ ನೀಡಿದೆ. ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂನ್ 10ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಪೀಠವು ನಿರ್ಮಾಪಕರ ಹೇಳಿಕೆ ದಾಖಲಿಸಿಕೊಂಡಿದ್ದು, ವಿವೇಚನೆ ಬಳಸಿ ಎಂದು ಕಿವಿಮಾತು ಹೇಳಿತು.. ಆದರೆ, ನಿರ್ಮಾಪಕರ ಮಂಡಳಿಯು ಕರ್ನಾಟಕದಲ್ಲಿ ಸದ್ಯಕ್ಕೆ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದೆ. ಕಮಲ್ ಅವರ ಒಂದು ಹೇಳಿಕೆ ಇವತ್ತು ರಾಜ್ಯದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಅಂತಾ ಜಡ್ಜ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಇಲ್ಲ
ಥಗ್ ಲೈಫ್ ಮೂವಿ ಜೂನ್ 5ರಂದು ಎಲ್ಲಾ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಆದರೆ ಕನ್ನಡದಲ್ಲಿ ಜೂನ್ 5ರಂದು ಕಮಲ್ ಹಾಸನ್ ಅವರ ಸಿನಿಮಾ ರಿಲೀಸ್ ಆಗುವುದಿಲ್ಲ. ಕಮಲ್ ಹಾಸನ್ ಅವರು ಕನ್ನಡಕ್ಕೆ ಮಾಡಿರುವ ಈ ಸಮಸ್ಯೆ ಬಗೆಹರಿಯುವವರೆಗೂ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಪ್ರದರ್ಶನ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಜೂನ್10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್ ಒಂದು ವಾರದೊಳಗೆ ಇದನ್ನು ಇತ್ಯರ್ಥ ಪಡಿಸುವಂತೆ ಹೇಳಿದೆ.
