ಈಗಾಗಲೇ ನಟ ಕಮಲ್ ಹಾಸನ್ ತಮ್ಮ ವಿವಾದಾತ್ಮಕ ಹೇಳಿಕೆ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿಕೆ ನೀಡಿದ್ದಲ್ಲದೇ ತಪ್ಪೇ ಮಾಡಿಲ್ಲ, ಕ್ಷಮೆಯೂ ಕೇಳಲ್ಲ ಎಂದು ಪಟ್ಟು ಹಿಡಿದಿರೋ ನಟ ಕಮಲ್ ಹಾಸನ್‌ಗೆ (Kamal Haasan) ತಕ್ಕ ಪಾಠ ಕಲಿಸಲು ಕನ್ನಡಪರ ಸಂಘಟನೆ ಮುಂದಾಗಿದೆ. ಇದರಿಂದ ಜೂನ್ 5ರಂದು ರಿಲೀಸ್‌ಗೆ ಸಜ್ಜಾಗಿರುವ ‘ಥಗ್ ಲೈಫ್’ (Thug Life) ಚಿತ್ರದ ಪ್ರದರ್ಶನಕ್ಕೆ ಬ್ಯಾನ್ ಬಿಸಿ ತಟ್ಟಿದೆ. ಈ ನಡುವೆ ಚಿತ್ರಕ್ಕೆ ಅಡ್ಡಿಪಡಿಸದಂತೆ ನಟ ಕಮಲ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಥಗ್ ಲೈಫ್ʼ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ತಮ್ಮ ಒಡೆತನದ ರಾಜಕಮಲ್ ಫಿಲ್ಮ್ ಇಂಟರ್ನ್ಯಾ ಷನಲ್ ಸಂಸ್ಥೆಯ ಸಿಇಒ ಮೂಲಕ ಕಮಲ್ ಹಾಸನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಕಮಲ್ ಫಿಲ್ಮ್ ಇಂಟರ್ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯನಿವರ್ಹಣಾಧಿಕಾರಿ(ಸಿಇಒ) ವಿ.ನಾರಾಯಣನ್ ಅವರ ಮೂಲಕ ಕಮಲ್ ಹಾಸನ್ ಈ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಕೆಯಾಗಿದ್ದು, ಮೇಲ್ವಿಚಾರಣೆ ಬಾಕಿಯಿದೆ. ಆದ್ರೆ ಈ ಬಗ್ಗೆ ಕಮಲ್ ಹಾಸನ್ ಎಲ್ಲಿಯೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ..
ಚಲನಚಿತ್ರ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
