ಬೆಂಗಳೂರು, ಮಾ.13 : ರಾಜ್ಯದಲ್ಲಿ ಉಂಟಾಗಿರುವ ಅಡುಗೆ ಅನಿಲ ಸಮಸ್ಯೆ ಮುಂದಿನ ವಾರದೊಳಗೆ ಇತ್ಯರ್ಥವಾಗಲಿದೆ. ವಾಣಿಜ್ಯ ಸಿಲಿಂಡರ್ ಸ್ಟಾಕ್ ಇಲ್ಲ, ಹೋಟೆಲ್ ಉದ್ಯಮದವರು ತಾಳ್ಮೆ ಕಾಯ್ದುಕೊಳ್ಳಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ್ ಮತ್ತು ಎಂ.ನಾಗರಾಜು ಅವರು ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿಲಿಂಡರ್ ಪೂರೈಕೆ ಕುರಿತು ಈಗ ಉದ್ಬವವಾಗಿರುವ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂದು (ಶುಕ್ರವಾರ) ಬೆಳಗ್ಗೆ ಇಲಾಖೆ ಕಾರ್ಯದರ್ಶಿ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಆಯಿಲ್ ಕಂಪನಿಗಳ ಜೊತೆಗೆ ಸಭೆ ಮಾಡಿದ್ದೇನೆ, ಅವರು ವಾಣಿಜ್ಯ ಸಿಲಿಂಡರ್ ಪೂರೈಕೆಗೆ ಒಪ್ಪಿದ್ದಾರೆ. ಸಮಸ್ಯೆಗೆ ಶೀಘ್ರವೇ ಮುಕ್ತಿ ದೊರೆಯಲಿದೆ ಎಂದು ಮುನಿಯಪ್ಪ ಭರವಸೆ ಕೊಟ್ಟರು.
ರಾಜ್ಯದ ಆಸ್ಪತ್ರೆಗಳಲ್ಲಿ ಊಟ ತಯಾರಿಕೆ ಮೇಲೂ ಸಮಸ್ಯೆ ಆಗಿದೆ. ಆಸ್ಪತ್ರೆಗಳಲ್ಲಿ ಅತ್ಯಗತ್ಯ ಪದಾರ್ಥ ತಯಾರಿಕೆಗೆ ಆಗುವಷ್ಟು ಅನಿಲ ಪೂರೈಕೆ ಮಾಡಲು ಸರ್ಕಾರ ಆದ್ಯತೆ ನೀಡಲಿದೆ. ಆಸ್ಪತ್ರೆಗಳ ಪೂರೈಕೆ ನಿಲ್ಲಿಸುವಂತಿಲ್ಲ. ವಾಣಿಜ್ಯ ಸಿಲಿಂಡರ್ಗಳು ಅಗತ್ಯದಷ್ಟು ದಾಸ್ತಾನು ಇಲ್ಲ. ಆದರೂ ಆಸ್ಪತ್ರೆಗಳಿಗೆ ಒದಗಿಸಲು ಪೂರೈಕೆದಾರರು ಒಪ್ಪಿದ್ದಾರೆ. ಆದರೆ ಹೋಟೆಲ್ ಉದ್ಯಮಿಗಳು ಮುಂದಿನ ಎಂಟತ್ತು ದಿನ ತಾಳ್ಮೆಯಿಂದ ಕಾಯಬೇಕು. ಹೋಟೆಲ್ಗಳಲ್ಲಿ ವಿದ್ಯುತ್ ಒಲೆಯೊಂದಿಗೆ ಅಗತ್ಯ ಆಹಾರ ಪದಾರ್ಥ ಸಿದ್ಧಪಡಿಸಿಕೊಳ್ಳಬೇಕು ಎಂದು ಅವರು ಕೋರಿದರು.
ಶೀಘ್ರವೇ ಬರಲಿವೆ 12 ತೈಲ ಹಡಗು, ಸಮಸ್ಯೆ ನಿವಾರಣೆ :
ರೆಸಿಡೆನ್ಸಿಯಲ್ ಸ್ಕೂಲ್, ಹಾಸ್ಟೆಲ್ ಸೇರಿ ಮುಂತಾದ ಕಡೆಗಳಲ್ಲಿ ಆಗಿರುವ ಸಮಸ್ಯೆಯತ್ತಲೂ ಗಮನ ಹರಿಸುತ್ತೇವೆ. ಭಾರತಕ್ಕೆ ಎರಡು ಹಡಗುಗಳು ತೈಲ ಸಮೇತ ಆಗಮಿಸಿವೆ. ಮುಂದೆ ಸುಮಾರು ಹತ್ತರಿಂದ ಹನ್ನೆರಡು ಹಡಗುಗಳು ಬರಲಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಂಡು ಹೆಚ್ಚಿನ ಮಾಹಿತಿ ನೀಡುತ್ತೇನೆ. ಹಾಲಿ ಬಂದ ಹಡಗುಗಳಿಂದ ತೈಲ ಸಂಸ್ಕರಿಸಿ ರಾಜ್ಯದಲ್ಲಿ ಪೂರೈಕೆಗೆ ಬೇಕಾದ ಏರ್ಪಾಡು ಮಾಡಿಕೊಳ್ಳುವಂತೆ ಅಧಿಕಾರಿಗಳು, ಕಂಪನಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಬೆಂಗಳೂರಿನ ಹೋಟೆಲ್, ಪಿಜಿ, ಅಸ್ಪತ್ರೆಗಳು, ಇಂದಿರಾ ಕ್ಯಾಂಟಿನ್, ದೇವಸ್ಥಾನಗಳಿಗೂ ಬಿಸಿ ತಟ್ಟಿದೆ. ವಾಣಿಜ್ಯ ಸಿಲಿಂಡರ್ ಹೆಚ್ಚಿನ ಬೆಲೆಗೆ ಮಾರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಗ್ರಾಹಕರಿಗೆ ಸಿಗಬೇಕಾದ ಸಿಲಿಂಡರ್ ಕಾಳಸಂತೆಗೆ ಹೋಗದಂತೆ ತಡೆಯುವಂತೆ ತಿಳಿಸಿದ್ದೇವೆ. ಇನ್ನೊಂದು ವಾರದಲ್ಲಿ ವಾಣಿಜ್ಯ ಸಿಲಿಂಡರ್ ಸಿಗುವ ಭರವಸೆ ಇದೆ. ಇನ್ನೂ ಬೆಂಗಳೂರು ಮತ್ತು ಮಂಗಳೂರು ನಗರದಲ್ಲಿ ಎಲ್ಪಿಜಿ ಬಳಸಿ ಚಾಲನೆ ಮಾಡುವ ಆಟೋಗಳು ಅನಿಲ ಪೂರೈಕೆ ಸಮಸ್ಯೆ ಎದುರಿಸುತ್ತಿವೆ, ಇದರ ನಿವಾರಣೆಗೆ ಸೂಚಿಸಿದ್ದೇನೆ. ಇನ್ನೂ ಅಡುಗೆ ಅನಿಲ ಮೇಲೆ ರಾಜ್ಯ ಸರ್ಕಾರ ಶೇ.55 ರಷ್ಟು ತೆರಿಗೆ ಹಾಕಿದ್ದರ ಬಗ್ಗೆ ಮಾಹಿತಿ ಇಲ್ಲ ತಿಳಿದುಕೊಂಡು ಆ ಬಗ್ಗೆ ಮಾತನಾಡುವೆ ಎಂದು ಅವರು ಕಲಾಪದಲ್ಲಿ ಉತ್ತರಿಸಿದರು.
