Advertisement

ಬೆಂಗಳೂರು, ಫೆ.18: ಮನರಂಜನೆಗೆ ಮತ್ತೊಂದು ಹೆಸರೇ ಜೀ಼ ಕನ್ನಡ. ಜನಪ್ರಿಯ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಗಳಿಂದ ಹೊಸತನದ ಮೆರುಗನ್ನು ನೀಡಿ ಎಲ್ಲಾ ವಯೋಮಿತಿಯ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದೆ. ಈಗ ಸಿನಿಪ್ರಿಯರಿಗೆ ಇಲ್ಲಿದೆ ನೋಡಿ ಮತ್ತೊಂದು ಗುಡ್ ನ್ಯೂಸ್. ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ.ಶೆಟ್ಟಿ ನಟನೆಯ, ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ‘45‘ ಚಿತ್ರವು ಇದೇ ಫೆಬ್ರವರಿ 22 ರಂದು ಸಂಜೆ 4:30 ಕ್ಕೆ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

45 ಸಿನೆಮಾ ಫ್ಯಾಂಟಸಿ ಆಕ್ಷನ್ ಡ್ರಾಮಾ ಆಗಿದ್ದು ಇಲ್ಲಿ ಫಿಲಾಸಫಿ ಜೊತೆಗೆ ಆಕ್ಷನ್ ಹಾಗೂ ಭಾವನಾತ್ಮಕ ಅಂಶಗಳು ಮನಮುಟ್ಟುವಂತಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ನಿರ್ದೇಶಕರಾಗಿ ಪದಾರ್ಪಣೆ ಮಾಡಿರುವ ಈ ಚಿತ್ರವನ್ನು ಎಂ. ರಮೇಶ್ ರೆಡ್ಡಿ ಅವರು ಸುರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಉತ್ತಮ ತಾರಾಬಳಗ, ವಿಭಿನ್ನವಾದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಅತೀಂದ್ರೀಯ ಅಂಶಗಳು ಮತ್ತು ಜೀವನದ ಮೌಲ್ಯಗಳನ್ನು ಅದ್ಭುತವಾಗಿ ತೋರಿಸಿದ್ದಾರೆ. ಇನ್ನು 3 ದಿಗ್ಗಜರು ಜೊತೆಯಾಗಿ ನಟಿಸಿರುವ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುತ್ತದೆ.

45 ಚಿತ್ರದ ಕಥೆ ವಿನಯ್ (ರಾಜ್ ಬಿ. ಶೆಟ್ಟಿ) ಎಂಬ ಸಾಧು ಸ್ವಭಾವದ ಸಾಫ್ಟ್‌ವೇರ್ ಎಂಜಿನಿಯರ್ ಸುತ್ತ ಸಾಗುತ್ತದೆ. ತಾಯಿಯೊಂದಿಗೆ ಮತ್ತು ತನ್ನ ಗೆಳತಿ ಮೇಘನಾಳ ಜೊತೆ ಸರಳ ಹಾಗೂ ಸಂತೋಷಕರ ಜೀವನ ನಡೆಸುತ್ತಿದ್ದ ಅವನ ಬದುಕು, ಒಂದು ಅನಿರೀಕ್ಷಿತ ಘಟನೆಯಿಂದ ಸಂಪೂರ್ಣವಾಗಿ ಬದಲಾಗುತ್ತದೆ. ಲೋಕಲ್ ಡಾನ್ ರಾಯಪ್ಪ (ಉಪೇಂದ್ರ) ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದ ‘ರೋಸಿ’ ಎಂಬ ಕಪ್ಪು ನಾಯಿಯನ್ನು ವಿನಯ್ ಅರಿಯದೆ ಗುದ್ದಿ ಸಾವಿಗೆ ಕಾರಣನಾಗುತ್ತಾನೆ. ದುಃಖದಿಂದ ಕಂಗಾಲಾದ ಹಾಗೂ ಕೋಪದಿಂದ ಉರಿಯುತ್ತಿರುವ ರಾಯಪ್ಪ, ತಕ್ಷಣ ಶಿಕ್ಷೆ ನೀಡದೆ, ಗರುಡ ಪುರಾಣದಲ್ಲಿರುವ ಮರಣಾನಂತರ ಜೀವನದ ತತ್ವವನ್ನು ಉಲ್ಲೇಖಿಸಿ, ವಿನಯ್‌ಗೆ ತನ್ನ ತಪ್ಪಿನ ಬಗ್ಗೆ ಆತ್ಮ ಪರಿಶೀಲನೆ ಮಾಡಲು 45 ದಿನಗಳ ಕಾಲಾವಕಾಶ ನೀಡುತ್ತಾನೆ. ಭಯ ಮತ್ತು ಆತಂಕದಿಂದ ಬಳಲುತ್ತಿರುವ ವಿನಯ್, ತನ್ನ ಬದುಕಿನ ಘಟನೆಗಳನ್ನು ಮುಂಚಿತವಾಗಿ ಸೂಚಿಸುವ ಭಯಾನಕ ಕನಸುಗಳನ್ನು ಕಾಣಲು ಆರಂಭಿಸುತ್ತಾನೆ — ಅದರಲ್ಲಿ ತನ್ನದೇ ಅಂತ್ಯದ ಚಿತ್ರಣವೂ ಸೇರಿದೆ. ಈ ಗೊಂದಲದ ನಡುವೆ, ಅವನು ಶಿವಣ್ಣ (ಶಿವ ರಾಜಕುಮಾರ್) ಅವರನ್ನು ಭೇಟಿಯಾಗುತ್ತಾನೆ. ದಿಟ್ಟ ವ್ಯಕ್ತಿತ್ವ ಹೊಂದಿರುವ ಶಿವಣ್ಣ, ಅವನ ಮಾರ್ಗದರ್ಶಕ ಹಾಗೂ ರಕ್ಷಕರಾಗಿ ನಿಂತುಕೊಳ್ಳುತ್ತಾರೆ. 45 ದಿನಗಳ ಕೌಂಟ್‌ಡೌನ್ ಆರಂಭವಾಗುತ್ತಿದ್ದಂತೆ, ವಿನಯ್ ತನ್ನ ಹಣೆಬರಹವನ್ನು ಮತ್ತು ಭವಿಷ್ಯದಲ್ಲಿ ತನ್ನ ಜೀವನದಲ್ಲಿ ಏನಾಗಬಹುದು ಎಂಬುದನ್ನು ಊಹಿಸಿಕೊಳ್ಳಲು ಶುರು ಮಾಡುತ್ತಾನೆ. ಈ ಎಲ್ಲಾ ಅಂಶಗಳು ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲವನ್ನು ಉಂಟು ಮಾಡುತ್ತದೆ.

ಪ್ರಿಮಿಯರ್ ಬಗ್ಗೆ ಮಾತನಾಡಿದ ಚೀಫ್ ಚಾನೆಲ್ ಆಫೀಸರ್- ಜೀ಼ ಕನ್ನಡ ಮತ್ತು ಬಿಸಿನೆಸ್ ಹೆಡ್ ಕನ್ನಡ ಜೀ಼5, ದೀಪಕ್ ಶ್ರೀರಾಮುಲು ಅವರು “ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರು ಜೊತೆಯಾಗಿ ಕಾಣಿಸಿಕೊಂಡಿರುವುದು ಈ ಚಿತ್ರದ ತೂಕವನ್ನು ದುಪ್ಪಟ್ಟು ಮಾಡಿದೆ. ಈ ಮೂವರು ದಿಗ್ಗಜರು ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳುವುದನ್ನು ನೋಡುವುದೇ ಒಂದು ಚಂದದ ಅನುಭವ. ಇದು ಜಸ್ಟ್ ಪ್ರೀಮಿಯರ್ ಅಷ್ಟೇ ಅಲ್ಲ, ಇದು ಜೀ಼ ಕನ್ನಡ ಪ್ರೇಕ್ಷಕರಿಗೆ ಒಂದು ಹಬ್ಬ” ಎಂದರು.
ವಿನಯ್ ಬಂದಿರುವ ಕಷ್ಟದಿಂದ ಪಾರಾಗ್ತಾನಾ? ಅಥವಾ ವಿಧಿಬರಹಕ್ಕೆ ಗುರಿಯಾಗ್ತಾನಾ? ಇವಕ್ಕೆಲ್ಲಾ ಉತ್ತರ ತಿಳ್ಕೊಳೋಕೆ ವೀಕ್ಷಿಸಿ 45 ಜೀ಼ ಕನ್ನಡ ವಾಹಿನಿಯಲ್ಲಿ ಇದೇ ಫೆಬ್ರವರಿ 22 ರಂದು ಸಂಜೆ 4:30 ಕ್ಕೆ.

Share.
Leave A Reply