ಬೆಂಗಳೂರು, ಮಾ.21: ಐಪಿಎಲ್ 2026ರ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಹಂತದ ಪಂದ್ಯಗಳ ಟಿಕೆಟ್ ಖರೀದಿಗೆ ಸಂಬಂಧಿಸಿದಂತೆ ಮಹತ್ವದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸದ್ಯಕ್ಕೆ ಟಿಕೆಟ್ ಮಾರಾಟ ಇನ್ನೂ ಆರಂಭವಾಗಿಲ್ಲವಾದರೂ, ಅಭಿಮಾನಿಗಳು ಗೊಂದಲವಿಲ್ಲದೆ ಟಿಕೆಟ್ ಕಾಯ್ದಿರಿಸಲು ಅನುಕೂಲವಾಗುವಂತೆ ಫ್ರಾಂಚೈಸಿಯು ಬುಕ್ಕಿಂಗ್ ಪ್ರಕ್ರಿಯೆಯನ್ನು ವಿವರಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಎರಡು ಪಂದ್ಯಗಳು :
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳ ಕಾರಣದಿಂದಾಗಿ ಐಪಿಎಲ್ನ ಭಾಗಶಃ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಇದರಂತೆ, ಇದೇ ಮಾ.28 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದೊಂದಿಗೆ ಆರ್ಸಿಬಿ ತನ್ನ ಸರಣಿಯನ್ನು ಆರಂಭಿಸಲಿದೆ. ಏ.5 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮತ್ತೊಂದು ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಈ ಎರಡು ಪಂದ್ಯಗಳು ಮಾತ್ರ ಖಚಿತವಾಗಿವೆ.
ಇನ್ನು, ಟಿಕೆಟ್ ದಂಧೆ ಮತ್ತು ವಂಚನೆಗಳನ್ನು ತಡೆಗಟ್ಟಲು ಆರ್ಸಿಬಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಭಿಮಾನಿಗಳು ಕೇವಲ ಅಧಿಕೃತ ಪ್ಲಾಟ್ಫಾರ್ಮ್ಗಳ ಮೂಲಕವೇ ಟಿಕೆಟ್ ಖರೀದಿಸಬೇಕು ಮತ್ತು ಯಾವುದೇ ಅನಧಿಕೃತ ವ್ಯಕ್ತಿಗಳ ಅಥವಾ ಮೂಲಗಳ ಮೊರೆ ಹೋಗಬಾರದು ಎಂದು ಎಚ್ಚರಿಸಿದೆ.
RCB ಫ್ಯಾನ್ಸ್ಗೆ ಮೆಟ್ರೋ ಫ್ರೀ:
ಪಂದ್ಯದ ದಿನದಂದು ಟಿಕೆಟ್ ಹೊಂದಿರುವ ಅಭಿಮಾನಿಗಳಿಗೆ ಬೆಂಗಳೂರು ಮೆಟ್ರೋದಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುತ್ತದೆ. ಜೊತೆಗೆ ಟಿಕೆಟ್ ಬುಕ್ ಮಾಡುವಾಗಲೇ ಸೀಮಿತ ಪಾರ್ಕಿಂಗ್ ಸ್ಲಾಟ್ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು. ಇದರೊಂದಿಗೆ ಕ್ರೀಡಾಂಗಣದ ಹತ್ತಿರ ಪಿಕ್-ಅಪ್ ಮತ್ತು ಡ್ರಾಪ್ ಶಟಲ್ ಸೌಲಭ್ಯವೂ ಇರಲಿದೆ. ಸುಗಮ ಜನದಟ್ಟಣೆ ನಿರ್ವಹಣೆಗಾಗಿ ಕೇವಲ ಕಬ್ಬನ್ ರಸ್ತೆ ಮತ್ತು ಲಿಂಕ್ ರಸ್ತೆಗಳ ಮೂಲಕ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಟಿಕೆಟ್ ಮಾರಾಟದ ದಿನಾಂಕಗಳು ಶೀಘ್ರದಲ್ಲೇ ಪ್ರಕಟವಾಗಲಿದ್ದು, ಆನ್ಲೈನ್ ಮತ್ತು ಆಫ್ಲೈನ್ ಎರಡೂ ಮಾದರಿಯಲ್ಲಿ ಲಭ್ಯವಿರಲಿವೆ.
ಆನ್ಲೈನ್: ಆರ್ಸಿಬಿ ಅಧಿಕೃತ ವೆಬ್ಸೈಟ್, BookMyShow ಮತ್ತು ಜೊಮ್ಯಾಟೋದ District App ಮೂಲಕ ಯುಪಿಐ, ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಬುಕ್ ಮಾಡಬಹುದು.
ಆಫ್ಲೈನ್: ಕ್ರೀಡಾಂಗಣದ ಕೌಂಟರ್ಗಳು ಮತ್ತು ಅಧಿಕೃತ ರೀಟೇಲ್ ಔಟ್ಲೆಟ್ಗಳಲ್ಲಿ ಟಿಕೆಟ್ ಪಡೆಯಬಹುದು. ಆಫ್ಲೈನ್ ಖರೀದಿಗೆ ಗುರುತಿನ ಚೀಟಿ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ಪೋರ್ಟ್ ಅಥವಾ ಇತರೆ) ಕಡ್ಡಾಯವಾಗಿದೆ.
ಚಾಂಪಿಯನ್ ತಂಡದ ಸಿದ್ಧತೆ:
ರಜತ್ ಪಾಟಿದಾರ್ ನೇತೃತ್ವದ ಆರ್ಸಿಬಿ ತಂಡವು ಕಳೆದ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಕಾನ್ಫಿಡೆನ್ಸ್ನಲ್ಲಿಯೇ ಇದೆ. ಈಗಾಗಲೇ ವಿರಾಟ್ ಕೊಹ್ಲಿ ಬೆಂಗಳೂರಿಗೆ ಆಗಮಿಸಿದ್ದು, ಮುಖ್ಯ ತರಬೇತುದಾರ ಆಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಆರ್ಸಿಬಿ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ತಂಡದ ಪ್ರಮುಖ ಆಟಗಾರರ ಜೊತೆಗೆ ಈ ಬಾರಿ ಮಿನಿ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಮತ್ತು ಜೇಕಬ್ ಡಫಿ ಅಂತಹ ಆಟಗಾರರನ್ನು ಸೇರಿಸಿಕೊಳ್ಳುವ ಮೂಲಕ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಈ ಬಾರಿ ಬೆಂಗಳೂರಿನಲ್ಲಿ 5 ಪಂದ್ಯಗಳು ಹಾಗೂ ರಾಯ್ಪುರದಲ್ಲಿ ಕೆಲವು ಪಂದ್ಯಗಳನ್ನು ಆರ್ಸಿಬಿ ಆಡಲಿದೆ.
