ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ಹಿಂದೂಗಳ ಮೇಲಿನ ದೌರ್ಜನ್ಯ, ಹಿಂಸಾಚಾರ ಮುಂದುವರೆದಿದ್ದು, ಈಗ ಮತ್ತೋರ್ವ ಹಿಂದು ಯುವಕ(Hindu Man) ನನ್ನು ಅಲ್ಲಿನ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಬಜೇಂದ್ರ ಬಿಸ್ವಾಸ್ ಎಂಬ ಯುವಕನನ್ನು ಹತ್ಯೆ ಮಾಡಲಾಗಿದೆ. ಇದೇ ತಿಂಗಳಲ್ಲಿ ಬಾಂಗ್ಲಾದಲ್ಲಿ ನಡೆದ ಮೂರನೇ ಹಿಂದು ಹತ್ಯೆ ಇದಾಗಿದೆ.
ಭಾಲುಕಾ ಉಪಜಿಲ್ಲಾದಲ್ಲಿ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕರ್ತವ್ಯದಲ್ಲಿದ್ದಾಗ ಬಿಸ್ವಾಸ್ (40) ಎಂಬ ಯುವಕನನ್ನು ಹತ್ಯೆ ಮಾಡಿದ್ದಾರೆ. ಉಪಜಿಲ್ಲಾದ ಮೆಹ್ರಾಬರಿ ಪ್ರದೇಶದಲ್ಲಿರುವ ಸುಲ್ತಾನ ಸ್ವೆಟರ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಬಿಸ್ವಾಸ್ ಬಾಂಗ್ಲಾದೇಶದ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಅರೆಸೈನಿಕ ಸಹಾಯಕ ಪಡೆಯಾದ ಅನ್ಸರ್ ಬಹಿನಿಯ ಸದಸ್ಯರಾಗಿದ್ದರು. ಕೊಲೆ ಮಾಡಿದ ಅನ್ಸಾರ್ ಸದಸ್ಯ ನೋಮನ್ ಮಿಯಾನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನೋಮನ್ ತನ್ನ ಬಂದೂಕಿನಿಂದ ಗುಂಡು ಹಾರಿಸಿದ್ದು, ಬಿಸ್ವಾಸ್ ಎಡ ತೊಡೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟರಲ್ಲಿ ಬಿಸ್ವಾನ್ ಸಾವನ್ನಪ್ಪಿದ್ದಾರೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂದೂಗಳ ಮೂರನೇ ಹತ್ಯೆ ಇದಾಗಿದೆ. ಡಿ. 24 ರಂದು ಅಲ್ಲಿನ ಕಲಿಮೋಹರ್ ಒಕ್ಕೂಟದ ಹೊಸೈನ್ಡಂಗಾ ಪ್ರದೇಶದಲ್ಲಿ 29 ವರ್ಷದ ಅಮೃತ್ ಮಂಡಲ್ ಎಂಬ ಯುವುಕನನ್ನು ಗುಂಪೊಂದು ಹಲ್ಲೆ ನಡೆಸಿತ್ತು. ಡಿ.18ರಂದು ಮೈಮೆನ್ಸಿಂಗ್ನ ಭಾಲುಕಾ ಉಪಜಿಲ್ಲಾದಲ್ಲಿರುವ ಕಾರ್ಖಾನೆಯಲ್ಲಿ ಸುಳ್ಳು ಧರ್ಮನಿಂದೆಯ ಆರೋಪದ ಮೇಲೆ 25 ವರ್ಷದ ಹಿಂದೂ ಯುವಕ ದೀಪು ಚಂದ್ರ ದಾಸ್ ರನ್ನು ಕ್ರೂರವಾಗಿ ಹತ್ಯೆ ಮಾಡಿತ್ತು. ಬಾಂಗ್ಲಾದೇಶವು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಜಗತ್ತಿನಾದ್ಯಂತ ಇದು ದೊಡ್ಡ ಆಕ್ರೋಶಕ್ಕೆ ಕಾರಣವಾಗುತ್ತಿದೆ.
