ಬೆಂಗಳೂರು, ಮಾ.20: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತದ ನಡುವೆ, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಇಂದು (ಶುಕ್ರವಾರ) ಪ್ರೀಮಿಯಂ ದರ್ಜೆಯ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂಪಾಯಿಗೂ ಅಧಿಕ ಏರಿಕೆ ಮಾಡಿವೆ. ಆದರೆ, ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಪ್ರೀಮಿಯಂ ಇಂಧನಗಳ ಹೊಸ ದರ :
ಈ ಬೆಲೆ ಏರಿಕೆಯು ಪ್ರೀಮಿಯಂ ಗುಣಮಟ್ಟದ ಇಂಧನಗಳಾದ BPCLನ ʻಸ್ಪೀಡ್ʼ (Speed), HPCLನ ʻಪವರ್ʼ (Power) ಮತ್ತು IOCLನ ʻXP95ʼ ವೇರಿಯಂಟ್‌ಗಳಿಗೆ ಅನ್ವಯವಾಗಲಿದೆ. ಪರಿಷ್ಕೃತ ದರಗಳ ಪ್ರಕಾರ, ಈ ಇಂಧನಗಳ ಬೆಲೆ ಪ್ರತಿ ಲೀಟರ್‌ಗೆ 2.09 ರೂ. ನಿಂದ 2.35 ರೂ. ವರೆಗೆ ಏರಿಕೆಯಾಗಿದೆ. ಆದರೆ, ಸಾಮಾನ್ಯ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಸಾಮಾನ್ಯ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು HPCL ತಿಳಿಸಿದೆ.

ಬೆಲೆ ಏರಿಕೆಗೆ ಕಾರಣವೇನು? :
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮೂಡಿದೆ. ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಪೂರೈಕೆಯ ಪ್ರಮುಖ ಕೇಂದ್ರವಾದ ʻಹಾರ್ಮುಜ್ ಜಲಸಂಧಿʼ ಮೂಲಕ ಸರಬರಾಜಾಗುವ ಇಂಧನಕ್ಕೆ ಅಡ್ಡಿಯುಂಟಾಗುವ ಭೀತಿ ಎದುರಾಗಿದೆ. ವಿಶ್ವದ ಒಟ್ಟು ಇಂಧನ ಪೂರೈಕೆಯ ಶೇ.20ರಷ್ಟು ಭಾಗ ಇದೇ ಮಾರ್ಗವಾಗಿ ಸಾಗುತ್ತದೆ. ಇರಾನ್ ಮತ್ತು ಇಸ್ರೇಲ್-ಯುಎಸ್ ನಡುವಿನ ಸಂಘರ್ಷದಿಂದಾಗಿ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿಗಳು ನಡೆಯುತ್ತಿದ್ದು, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ದಾಟಿದೆ.

ಭಾರತದ ಮೇಲಾಗುವ ಪರಿಣಾಮಗಳು :
ಭಾರತವು ತನ್ನ ಕಚ್ಚಾ ತೈಲದ ಅಗತ್ಯದ ಸುಮಾರು ಶೇ. 85-90 ರಷ್ಟು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಶೇ. 40-50 ರಷ್ಟು ಪೂರೈಕೆಯು ಹಾರ್ಮುಜ್ ಜಲಸಂಧಿಯ ಮೂಲಕವೇ ನಡೆಯುತ್ತದೆ. ಜಾಗತಿಕ ಬೆಲೆ ಏರಿಕೆಯಿಂದಾಗಿ ಹಡಗು ಸಾಗಣೆ ವೆಚ್ಚ ಮತ್ತು ವಿಮೆ ಪ್ರೀಮಿಯಂಗಳು ಹೆಚ್ಚಾಗುತ್ತಿವೆ. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 10 ಡಾಲರ್ ಹೆಚ್ಚಾದರೂ ಭಾರತದ ಆಮದು ಬಿಲ್ ಗಣನೀಯವಾಗಿ ಏರಿಕೆಯಾಗಲಿದೆ. ಈ ಬೆಳವಣಿಗೆಯಿಂದಾಗಿ ರೂಪಾಯಿ ಮೌಲ್ಯದ ಮೇಲೆ ಒತ್ತಡ ಬಿದ್ದಿದ್ದು, ವಿದೇಶಿ ಹೂಡಿಕೆದಾರರು ಹಿಂದೆ ಸರಿಯುತ್ತಿದ್ದಾರೆ. ಇದು ದೇಶದಲ್ಲಿ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

Share.
Leave A Reply