ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆಗಳು ನಡೆದಿದ್ದು, ಉತ್ತರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರವು ಒಟ್ಟು 3,450 ಕೋಟಿ ರೂ. ಬಿಡುಗಡೆಯಾಗಿದೆ.
ಉತ್ತರ ಕರ್ನಾಟಕದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ಕೂಡ ನೀಡಿದೆ. ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುದಾನ ಹಂಚಿಕೆ ಮಾಡಲಾಗಿದೆ. ಏತ ನೀರಾವರಿ ಯೋಜನೆಗೆ 210 ಕೋಟಿ ರೂ. ಬಿಡುಗಡೆ (ಬೆಳಗಾವಿ ಜಿಲ್ಲೆಯ ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕುಗಳಲ್ಲಿ ಬಾಧಿತ ಅಚ್ಚುಕಟ್ಟಿಗೆ ಕೃಷ್ಣಾ ನದಿಯಿಂದ ನೀರು ಎತ್ತಿ, ರಾಯಬಾಗ ಉನ್ನತಮಟ್ಟದ ವಿತರಣಾ ಕಾಲುವೆ (RHLD) ಮತ್ತು ರಾಯಬಾಗ ವಿತರಣಾ ಕಾಲುವೆಗಳಿಗೆ ನೀರು ಹರಿಸುವ ಯೋಜನೆ) ಯಾಗಿದೆ.
ಕೆರೂರು ಏತ ನೀರಾವರಿ ಯೋಜನೆಗೆ 1,503 ಕೋಟಿ ರೂ. ಬಿಡುಗಡೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಬೀಳಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿನ ಕೆರೂರು ಏತ ನೀರಾವರಿ ಯೋಜನೆಗೆ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.
ಶ್ರೀ ಕರಸಿದ್ದೇಶ್ವರ ಏತ ನೀರಾವರಿ ಯೋಜನೆಗೆ 198.90 ಕೋಟಿ ರೂ. ಅಂದಾಜು ಮೊತ್ತದ ಆಡಳಿತಾತ್ಮಕ ಅನುಮೋದನೆ (ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೃಷ್ಣಾ ನದಿಯಿಂದ ನೀರನ್ನು ಎತ್ತಿ ಚಿಕ್ಕೋಡಿ ಶಾಖಾ ಕಾಲುವೆಗೆ ನೀರು ಹರಿಸುವ 198.90 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆಗೆ ಅನುಮೋದನೆ) ಸಿಕ್ಕಿದೆ. ನಾರಾಯಣಪುರ ಬಲದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ಕಲ್ಪಿಸುವುದಕ್ಕಾಗಿ 990 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಮತ್ತು ಇತರೆ ಪ್ರದೇಶಗಳಿಗೆ ನಾರಾಯಣಪುರ ಬಲದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಜಾರಿಗೊಳಿಸಲಾಗಿದೆ. 19 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಯೋಜನೆಗೆ 272 ಕೋಟಿ ರೂ. – ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ವ್ಯಾಪ್ತಿಯಲ್ಲಿನ 19 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಯೋಜನೆ ಜಾರಿಗೊಳಿಸಲಾಗಿದೆ.
2,030 ಕಿ.ಮೀ ಉದ್ದದ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳಿಗೆ 275.53 ಕೋಟಿ ರೂ.( ಬೆಳಗಾವಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ-38ರಿಂದ ಧರ್ಮವೀರ ಸಂಭಾಜಿ ವೃತ್ತದವರೆಗೆ(ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮುಖಾಂತರ) ಬಿಡುಗಡೆ ಮಾಡಲಾಗಿದೆ.
