ಬೆಳಗಾವಿ: 21ನೇ ಶತಮಾನದಲ್ಲೂ ಹಲವಾರು ಅನಿಷ್ಟ ಪದ್ಧತಿಗಳು ರಾಜ್ಯದಲ್ಲಿ ಚಾಲ್ತಿಯಲ್ಲಿವೆ. ಇದರಿಂದಾಗಿ ಹಲವು ಕುಟುಂಬಗಳು ತತ್ತರಿಸಿ ಹೋಗಿದ್ದಂತೂ ಸತ್ಯ. ಸಾಮಾಹಿಕ ಬಹಿಷ್ಕಾರ (Social Boycott) ಕೂಡ ಈ ಸಾಲಿಗೆ ಸೇರುವ ಅನಿಷ್ಟ ಪದ್ಧತಿಯಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿದೆ.
ಚಳಿಗಾಲದ ಅಧಿವೇಶನವು ಬೆಳಗಾವಿಯಲ್ಲಿ ನಡೆಯುತ್ತಿದ್ದು (Vidhan Sabha) ಇಂದು ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ ಮಂಡಿಸಲಾಗಿದೆ. ಈ ಕಾನೂನಿನಂತೆ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬ ಸದಸ್ಯರನ್ನು ಬಹಿಷ್ಕಾರ ಹಾಕುವಂತಿಲ್ಲ. ಒಂದು ವೇಳೆ ಈ ಕಾನೂನಿನ ವಿರುದ್ಧವಾಗಿ ನಡೆದುಕೊಂಡರೆ ಅಂತಹ ವ್ಯಕ್ತಿಗಳಿಗೆ 3 ವರ್ಷ ಜೈಲು ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗುವುದು. ಬಹಿಷ್ಕಾರ ಹಾಕುವ ಕುರಿತು ಸಭೆ-ಪಂಚಾಯಿತಿ, ಸಹಾಯ, ಪ್ರಚೋದನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಸಾಮಾಹಿಕ ಬಹಿಷ್ಕಾರಕ್ಕೆ ಒತ್ತಡ ಹಾಕುವ ಮೂಲಕ ನಿರ್ಧಾರ ಕೈಗೊಂಡವರು. ಅದರ ಪರವಾಗಿ ಮತ ಹಾಕಿದವರು ಅಥವಾ ಅಂತಹ ಚರ್ಚೆಗಳಲ್ಲಿ ಭಾಗವಹಿಸಿದವರು ಅಪರಾಧಿಗಳೆಂದು ನಿರ್ಧರಿಸಲಾಗುತ್ತದೆ. ಈ ರೀತಿ ಬಹಿಷ್ಕಾರಕ್ಕೆ ಒಳಗಾಗುವವರು ಠಾಣೆ ಅಥವಾ ನ್ಯಾಯಾಧೀಶರಿಗೆ ನೇರವಾಗಿ ದೂರು ಸಲ್ಲಿಸಬಹುದು. ಈ ಕುರಿತು ದೂರು ಸಲ್ಲಿಕೆಯಾದರೆ ದೂರಿನ ತನಿಖೆ ನಡೆಸುವಂತೆ ನ್ಯಾಯಾಧೀಶರು ಆದೇಶಿಸಬಹುದು.
