ನವದೆಹಲಿ: ಬೆಂಗಳೂರು ಸೇರಿದಂತೆ ದೇಶದಲ್ಲಿ ಇಂಡಿಗೋ ಸಂಸ್ಥೆಯ 100ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಇವತ್ತೂ ಕ್ಷಮೆ ಕೇಳಿದೆ.

ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದಲ್ಲಿ (IndiGo) ಉಂಟಾಗಿರುವ ಈ ಅಡಚಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ದೇಶದ ಪ್ರಮುಖ ವಿಮಾನ ನಿಲ್ದಾಣಗಳಿಂದ ಸುಮಾರು 200ಕ್ಕೂ ಅಧಿಕ ವಿಮಾನಗಳ ಹಾರಟ ರದ್ದಾಗಿತ್ತು. ಅಲ್ಲದೇ, ಕೆಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು. ಆದರೆ, ಇಂದು ಕೂಡ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲದೇ, 100ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿದೆ.

ವಿಮಾನದಲ್ಲಿನ ತಾಂತ್ರಿಕ ದೋಷ ಹಾಗೂ ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ ಹಾರಾಟ ರದ್ದಾಗುವ (Flight Cancellations) ಸಾಧ್ಯತೆ ಕಂಡು ಬರುತ್ತಿದೆ ಎಂದು ವರದಿ ಹೇಳುತ್ತಿವೆ. ಹೀಗಾಗಿ ಪ್ರಯಾಣಿಕರು ಕಂಗಾಲಾಗುವಂತಾಗಿದೆ.

ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಬುಧವಾರ 43 ವಿಮಾನಗಳ ಹಾರಾಟ ರದ್ದುಗೊಳಿಸಿದ್ದ ಇಂಡಿಗೋ ಇಂದು 73 ವಿಮಾನಗಳ ಹಾರಾಟ ರದ್ದು ಮಾಡಿದೆ. 48 ಗಂಟೆಗಳಲ್ಲಿ ಪರಿಸ್ಥಿತಿ ಸುಧಾರಿಸುವ ಭರವಸೆ ನೀಡಿದೆ. ಜೊತೆಗೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ.

ಕಳೆದ ತಿಂಗಳಿಂದ ಜಾರಿಯಾಗಿರುವ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ಸ್ ಹಿನ್ನೆಲೆ ಪೈಲಟ್‌ಗಳು ಮತ್ತು ಸಿಬ್ಬಂದಿ ಡ್ಯೂಟಿ‌ಗೆ ಹಾಜರಾಗದಿರುವುದರಿಂದಾಗಿ ಹೆಚ್ಚಿನ ವ್ಯತ್ಯಯ ಉಂಟಾಗಲು ಕಾರಣ ಎಂದು ವರದಿ ಹೇಳುತ್ತಿವೆ.

ತಾಂತ್ರಿಕ ದೋಷ, ಚಳಿಗಾಲದ ವೇಳಾಪಟ್ಟಿ ಬದಲಾವಣೆ, ಹವಾಮಾನ ವೈಪರೀತ್ಯ, ವಿಮಾನಯಾನ ವ್ಯವಸ್ಥೆಯ ವಾಹನ ದಟ್ಟಣೆ, ನವೀಕರಿಸಿದ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ಸೇರಿದಂತೆ ಕೆಲವು ವಿಷಯಗಳು ವಿಮಾನಗ ಕಾರ್ಯಾಚರಣೆಯ ಮೇಲೆ ಪ್ರಭಾವ ಬೀರುತ್ತಿವೆ ಎನ್ನಲಾಗಿದೆ.

Share.
Leave A Reply