ಬರ್ಲಿನ್: ಜರ್ಮನಿಯಲ್ಲಿ (Germany) ಭಾರತೀಯ ವಿದ್ಯಾರ್ಥಿ (Indian Student) ಬೆಂಕಿಗೆ ಆಹುತಿಯಾಗಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.

ತೆಲಂಗಾಣದ ಹೃತಿಕ್ ರೆಡ್ಡಿ(25) ಸಾವನ್ನಪ್ಪಿರುವ ವಿದ್ಯಾರ್ಥಿ. ಜರ್ಮನಿಯಲ್ಲಿರುವ ನಿವಾಸದಲ್ಲಿ ತೀವ್ರ ಬೆಂಕಿ ಕಾಣಿಸಿಕೊಂಡಿತ್ತು. ತಡರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

ವೇಗವಾಗಿ ಹರಡುತ್ತಿದ್ದ ಬೆಂಕಿ ಮತ್ತು ದಟ್ಟ ಹೊಗೆಯಿಂದ ತಪ್ಪಿಸಿಕೊಳ್ಳಲು ಹೃತಿಕ್ ಬರ್ಲಿನ್‌ನ ಅಪಾರ್ಟ್‌ಮೆಂಟ್‌ನ ಮೇಲಿನ ಮಹಡಿಯಿಂದ ಹಾರಿದ್ದಾನೆ. ಪರಿಣಾಮ ಹೃತಿಕ್ ತಲೆಗೆ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಹೊಸ ವರ್ಷದ ದಿನದಂದೇ ಈ ಅವಘಡ ಸಂಭವಿಸಿದ್ದು, ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಶೋಕ ಆವರಿಸಿದೆ. ತೆಲಂಗಾಣದ ಜನಗಾಂವ್ ಜಿಲ್ಲೆಯ ಮಲ್ಕಾಪುರ್ ಗ್ರಾಮದಲ್ಲಿರುವ ಕುಟುಂಬಸ್ಥರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಹೃತಿಕ್ ರೆಡ್ಡಿ ಯುರೋಪ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ಪದವಿ ಪಡೆಯಲು 2023 ರ ಜೂನ್‌ನಲ್ಲಿ ಜರ್ಮನಿಯ ಮ್ಯಾಗ್ಡೆಬರ್ಗ್‌ಗೆ ತೆರಳಿದ್ದರು. 2022 ರಲ್ಲಿ ವಾಗ್ದೇವಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಪದವಿ ಪಡೆದಿದ್ದರು. ಕುಟುಂಬಸ್ಥರು ಮತ್ತು ಸ್ನೇಹಿತರು ವಿದೇಶಾಂಗ ಸಚಿವಾಲಯ (ಎಂಇಎ) ಮತ್ತು ಜರ್ಮನಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿ, ಮೃತದೇಹವನ್ನು ಅಂತಿಮ ವಿಧಿವಿಧಾನಗಳಿಗಾಗಿ ತವರಿಗೆ ತರುವ ಪ್ರಕ್ರಿಯೆಯಲ್ಲಿದ್ದಾರೆ.

Share.
Leave A Reply