ಜೀವನೋಪಾಯಕ್ಕಾಗಿ ದಿನಗೂಲಿ ಕೆಲಸ ಮಾಡುತ್ತಿದ್ದ ಪೋಷಕರ ಕನಸಿಗೆ ಚಿಗುರೊಡೆಯುವಂತೆ, ಚೌಲಿಹಳ್ಳಿ ಗ್ರಾಮದ ಸಂದೀಪ ಎಲ್. ಅವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಅದ್ಭುತ ಸಾಧನೆಯನ್ನು ದಾಖಲಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲೂಕಿನ ಅತ್ಯಂತ ಸರಳ ಕುಟುಂಬದಲ್ಲಿ ಹುಟ್ಟಿ ಬೆಳೆದ ಸಂದೀಪ ಅವರು, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಶಿವಮೊಗ್ಗ ಇವರು ನೀಡುವ ಡಾಕ್ಟರೇಟ್ (ಪಿ.ಎಚ್.ಡಿ) ಪದವಿಗೆ ಪಾತ್ರರಾಗಿದ್ದಾರೆ. ಕೂಲಿ ಕಾರ್ಮಿಕರಾದ ಶ್ರೀ ಲೋಕೇಶ್ವರಪ್ಪ ಹಾಗೂ ಶ್ರೀಮತಿ ತಿಪ್ಪಮ್ಮ ದಂಪತಿಗಳ ಪುತ್ರನಾದ ಸಂದೀಪ ಅವರು, ಬಡತನದ ನಡುವೆಯೂ ಗಟ್ಟಿಯಾದ ಕನಸು, ದುಡಿಮೆ ಮತ್ತು ಅಧ್ಯಯನಶೀಲತೆಯನ್ನು ಜೀವವೈಖರಿಯಾಗಿಸಿಕೊಂಡಿದ್ದರು.‘ಶಿಕ್ಷಕರ ಶಿಕ್ಷಣ ಸಂಸ್ಥೆಗಳ ಸಾಂಸ್ಥಿಕ ವಾತಾವರಣ, ಪ್ರಶಿಕ್ಷಕರ ವೃತ್ತಿ ನೈತಿಕತೆ ಮತ್ತು ಪ್ರಶಿಕ್ಷಕರ-ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಸಂಬಂಧಗಳ ಅಧ್ಯಯನ’ ಎಂಬ ಗಂಭೀರ ಅಕಾಡೆಮಿಕ್ ವಿಷಯದ ಮೇಲೆ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿಗೆ ಅರ್ಹತೆ ಪಡೆದಿದ್ದಾರೆ.ಇವರ ಸಂಶೋಧನೆಗೆ ಕುವೆಂಪು ವಿಶ್ವವಿದ್ಯಾಲಯದ ಖ್ಯಾತ ಶಿಕ್ಷಣಶಾಸ್ತ್ರ ತಜ್ಞರಾದ ಪ್ರೊ. ಜಗನ್ನಾಥ್ ಕೆ. ಡಾಂಗೆ ಅವರು ಮಾರ್ಗದರ್ಶಕರಾಗಿದ್ದಾರೆ. “ವಿದ್ಯೆ ಎಂದರೆ ಸಂಪತ್ತು; ಬಡತನ ಎಂದರೆ ಅಡ್ಡಿ ಅಲ್ಲ” ಎಂಬ ನಂಬಿಕೆಯನ್ನು ಬದುಕಿನ ಮೂಲಕ ಸಾಬೀತುಪಡಿಸಿದ ಸಂದೀಪ ಅವರ ಈ ಸಾಧನೆಗೆ, ಸ್ನಾತಕೋತ್ತರ ಶಿಕ್ಷಣಶಾಸ್ತ್ರ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರು, ಪ್ರಾಧ್ಯಾಪಕರು, ಸಿಬ್ಬಂದಿವರ್ಗ, ಕುಟುಂಬದವರು ಮತ್ತು ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ. ಗ್ರಾಮೀಣ ಪರಿಸರದಿಂದ ಬಂದು, ಅಷ್ಟೊಂದು ಸವಾಲುಗಳ ನಡುವೆಯೂ ಶೈಕ್ಷಣಿಕ ಶ್ರೇಷ್ಟತೆಯ ಶಿಖರಕ್ಕೇರುತ್ತಿರುವ ಸಂದೀಪ ಅವರ ಕಥೆ ಇಂದಿನ ಯುವಜನತೆಗೆ ಪ್ರೇರಣಾದಾಯಕ ಮಾದರಿಯಾಗಿದೆ.

Share.
Leave A Reply