ಹಿರಿಯ ಪತ್ರಕರ್ತ, ಲೇಖಕ ಹಾಗೂ ಸಂಪಾದಕರಾಗಿದ್ದ ಟಿ.ಜೆ.ಎಸ್. ಜಾರ್ಜ್ ನಿಧನರಾಗಿದ್ದಾರೆ. 6 ದಶಕಗಳಿಗೂ ಹೆಚ್ಚು ಕಾಲ ತೀಕ್ಷ್ಣ ಲೇಖನಿಗಳ ಮೂಲಕ ಭಾರತೀಯ ಹಾಗೂ ಅಂತರರಾಷ್ಟ್ರೀಯ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದ ಜಾರ್ಜ್, ತಮ್ಮ ಧೈರ್ಯಶಾಲಿ ಧ್ವನಿ ಮತ್ತು ಅಸಾಧಾರಣ ಸಂಪಾದಕೀಯ ದೃಷ್ಟಿಕೋನಕ್ಕಾಗಿ ಹೆಸರುವಾಸಿಯಾಗಿದ್ದರು. 1975ರಲ್ಲಿ ಹಾಂಗ್‌ಕಾಂಗ್‌ನಲ್ಲಿ ಏಷ್ಯಾವೀಕ್ ಇಂಗ್ಲಿಷ್ ವಾರಪತ್ರಿಕೆಯನ್ನು ಸ್ಥಾಪಿಸಿ ಅದರ ಸ್ಥಾಪಕ ಸಂಪಾದಕರಾಗಿದ್ದ ಜಾರ್ಜ್, ಏಷ್ಯಾದ ಆಗುಹೋಗುಗಳನ್ನು ಜಾಗತಿಕ ಮಟ್ಟದಲ್ಲಿ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತಕ್ಕೆ ಮರಳಿದ ನಂತರ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ “ಪಾಯಿಂಟ್ ಆಫ್ ವ್ಯೂ” ಎಂಬ ತಮ್ಮ ಜನಪ್ರಿಯ ಅಂಕಣದ ಮೂಲಕ ಭ್ರಷ್ಟಾಚಾರ, ಸಾಮಾಜಿಕ ಅನ್ಯಾಯ ಮತ್ತು ಧಾರ್ಮಿಕ ಅಸಹಿಷ್ಣುತೆಯ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದರು. 25 ವರ್ಷಗಳ ಕಾಲ ಅವರು ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದು, 97ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
1,300 ವಾರಗಳ ಕಾಲ ನಿರಂತರ ಅಂಕಣ ಬರೆದಿದ್ದ ಇವರು ನೂರಾರು ಪತ್ರಕರ್ತರಿಗೆ ಮಾರ್ಗದರ್ಶನ ನೀಡಿದ್ದರು. ಸಾಹಿತ್ಯ ಮತ್ತು ಶಿಕ್ಷಣಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ 2011 ರಲ್ಲಿ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು. ಟಿ.ಜೆ.ಎಸ್. ಜಾರ್ಜ್ ಅವರ ಸಾವಿನ ಸುದ್ದಿ ಕೇಳಿ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ತೆರಳಿ ಟಿ.ಜೆ.ಎಸ್. ಜಾರ್ಜ್‌ರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
Read Also : ಊಟಕ್ಕಿಂತ ಮುಂಚೆ ಇದನ್ನ ತಿಂದ್ರೆ 99% ಕಾಯಿಲೆಗಳು ದೂರ