ಬೆಂಗಳೂರು: ಮುಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಆದೇಶವನ್ನು ಕೋರ್ಟ್ ಮುಂದೂಡಿದೆ.
ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧದ ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಕೆಯಾಗಿತ್ತು. ಇದರ ಆದೇಶವನ್ನು ಕೋರ್ಟ್ ಡಿ. 23ಕ್ಕೆ ಕಾಯ್ದಿರಿಸಿದೆ. ಲೋಕಾಯುಕ್ತ ಸಲ್ಲಿಕೆ ಮಾಡಿದ್ದ ಬಿ ರಿಪೋರ್ಟ್ ಪ್ರಶ್ನಿಸಿ, ದೂರುದಾರ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಕೇಸ್ ಡೈರಿ ನೀಡುವಂತೆ ಎಸ್‌ಪಿಪಿ ಸೂಚನೆ ನೀಡಿದೆ. ಬಿ-ರಿಪೋರ್ಟ್ ಸಂಬಂಧಿಸಿದಂತೆ ಹೆಚ್ಚುವರಿ ವಾದವಿದ್ದರೆ ಸಲ್ಲಿಸುವಂತೆ ಇಡಿ, ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದೆ.
ಅಲ್ಲದೇ, ಅಂತಿಮ ವರದಿ ಸಲ್ಲಿಕೆ ಮಾಡದಿರುವು ಬಗ್ಗೆ ಕೂಡ ಕೋರ್ಟ್ ಪ್ರಶ್ನಿಸಿದೆ. ಉತ್ತರಿಸಿದ ವೆಂಕಟೇಶ್ ಅರಬಾಟಿ, ಈಗಾಗಲೇ ಅಂತಿಮ ವರದಿ ತಯಾರಿ ಆಗಿದೆ. ಅನುಮತಿ ಸಿಗದ ಕಾರಣ ಸಲ್ಲಿಸಿಲ್ಲ. ಸಮಯ ನೀಡಿದರೆ ಸಲ್ಲಿಸಲು ಸಿದ್ಧ ಎಂದು ಹೇಳಿದ್ದಾರೆ. ಆಕ್ಷೇಪ ವ್ಯಕ್ತಪಡಿಸಿದ ದೂರುದಾರ ಸ್ನೇಹಮಯಿ ಕೃಷ್ಣ, ಕೋರ್ಟ್ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಕಾಲಹರಣ ಮಾಡುತ್ತಾರೆ ಎಂದು ಆಕ್ಷೇಪಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಡಿ.23ಕ್ಕೆ ಆದೇಶ ಕಾಯ್ದಿರಿಸಿತು.
